ಸೋಮವಾರಪೇಟೆ, ಡಿ.17: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ಮಿನಿಸ್ಟರ್ ಕೋರ್ಟ್ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕುಶಾಲನಗರ ಜೆಬಿಎಸ್‍ಸಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಪಟ್ಟಣದ ಬಸವೇಶ್ವರ ರಸ್ತೆಯಲ್ಲಿರುವ ಸಾಕಮ್ಮನ ಬಂಗಲೆ ಮೈದಾನದಲ್ಲಿ ನಡೆದ ಫೈನಲ್ಸ್‍ನಲ್ಲಿ ಮಿನಿಸ್ಟರ್‍ಕೋರ್ಟ್ ತಂಡ 22-18 ಅಂಕಗಳ ಅಂತರದಿಂದ ಜೆಬಿಎಸ್‍ಸಿ ತಂಡದ ವಿರುದ್ಧ ಜಯಗಳಿಸಿತು. ಸೋಮವಾರಪೇಟೆಯ ಅರುಣ್ ಫ್ರೆಂಡ್ಸ್ ತಂಡ ತೃತೀಯ ಸ್ಥಾನ ಪಡೆಯಿತು.
ಐದರಿಂದ 7ನೇ ತರಗತಿವರೆಗೆ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಸಿದ್ದಾಪುರ ತಂಡ ಪ್ರಥಮ ಸ್ಥಾನ ಪಡೆದರೆ, ಸೋಮವಾರಪೇಟೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿತು.
18 ವಯಸ್ಸಿನ ಒಳಗಿನವರ ವಿಭಾಗದಲ್ಲಿ ಸೋಮವಾರಪೇಟೆ ಬಿವೈಸಿ ಪ್ರಥಮ, ಗೆಳೆಯರ ಬಳಗ ದ್ವಿತೀಯ ಮತ್ತು ಜೈ ಭೀಮ್ ಯುವಕ ಸಂಘ ತೃತೀಯ ಸ್ಥಾನ ಪಡೆಯಿತು. ಅಂತಿಮ ಪಂದ್ಯಾಟಕ್ಕೆ ಉದ್ಯಮಿಗಳಾದ ಹರಪಳ್ಳಿ ರವೀಂದ್ರ ಮತ್ತು ವಿನೋದ್ ಶಿವಪ್ಪ ಚಾಲನೆ ನೀಡಿದರು.
ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿ, ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಕೊಡಗು ಜಿಲ್ಲೆಯಲ್ಲೂ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಸಂಘ ಸಂಸ್ಥೆಗಳು ಕಬಡ್ಡಿ ಪಂದ್ಯಾಟವನ್ನು ಹೆಚ್ಚಾಗಿ ಆಯೋಜಿಸಿದ್ದಲ್ಲಿ, ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಿದಂತಾಗುತ್ತದೆ. ಪಟ್ಟಣದ ದಿ.ಇಂದಿರಾಗಾಂಧಿ ಅಭಿಮಾನಿ ಸಂಘದವರು ಕಳೆದ 31 ವರ್ಷಗಳಿಂದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವನ್ನು ನಡೆಸುತ್ತಿರುವದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಮಾತನಾಡಿ, ಬಹುತೇಕ ಕೂಲಿ ಕಾರ್ಮಿಕರೆ ಇರುವ ಸಂಘಕ್ಕೆ ದಾನಿಗಳು ಹೆಚ್ಚಿನ ಸಹಕಾರವನ್ನು ನೀಡಿದ್ದಾರೆ. ಮೂರು ದಶಕಗಳಿಂದ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಬಹುತೇಕ ಗ್ರಾಮೀಣ ಪ್ರತಿಭೆಗಳು ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗಳಂತಹ ಸರಕಾರಿ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಿದಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಪ.ಪಂ. ಸದಸ್ಯರಾದ ಶೀಲಾ ಡಿಸೋಜ, ಮೀನಾ ಕುಮಾರಿ, ಶಾಂತಮಲ್ಲಿಕಾರ್ಜುನ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ, ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ವಕೀಲ ಬಿ.ಇ. ಜಯೇಂದ್ರ, ಸಹಾಯಕ ಠಾಣಾಧಿಕಾರಿ ರವೀಂದ್ರ, ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ.ನಂದ, ಕರವೇ ತಾಲೂಕು ಅಧ್ಯಕ್ಷ ದೀಪಕ್, ಆಟೋ ಯೂನಿಯನ್ ಮಾಜಿ ಗೌರವಾಧ್ಯಕ್ಷ ಹಸನಬ್ಬ ಮತ್ತಿತರರು ಇದ್ದರು. ಪಂದ್ಯಾಟದ ತೀರ್ಪುಗಾರರಾಗಿ ಗೌಡಳ್ಳಿ ಪ್ರವೀಣ್, ಚೇತನ್, ಸತೀಶ್ ಕಾರ್ಯನಿರ್ವಹಿಸಿದರು.