ಸೋಮವಾರಪೇಟೆ,ಡಿ.17: ಇಲ್ಲಿನ ಜೇಸೀ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಆಹ್ವಾನಿತ ತಂಡಗಳ ನಡುವಿನ ಸೌಹಾರ್ಧ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಮಮಂದಿರ ತಂಡ ಪ್ರಥಮ ಸ್ಥಾನ ಪಡೆಯಿತು.
ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಜಯಕರ್ನಾಟಕ ತಂಡದ ವಿರುದ್ಧ ಜಯಗಳಿಸಿದ ರಾಮಮಂದಿರ ತಂಡ, ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ನಿಗದಿತ 8 ಓವರ್ಗಳಲ್ಲಿ 38 ರನ್ ಕಲೆಹಾಕಿದ ರಾಮಮಂದಿರ ತಂಡದ ಸವಾಲಿಗೆ ಪ್ರತ್ಯುತ್ತರ ನೀಡಿದ ಜಯಕರ್ನಾಟಕ ತಂಡ ಎಲ್ಲಾ ವಿಕೇಟ್ಗಳನ್ನು ಕಳೆದುಕೊಂಡು ಕೇವಲ 27 ರನ್ ಗಳಿಸಲಷ್ಟೇ ಶಕ್ತವಾಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆತಿಥೇಯ ಜೇಸೀ ಸಂಸ್ಥೆ, ರೋಟರಿ, ಲಯನ್ಸ್, ಡಾಲ್ಫಿನ್ಸ್ ಸ್ಪೋಟ್ರ್ಸ್ ಕ್ಲಬ್, ಚೇಂಬರ್ ಆಫ್ ಕಾಮರ್ಸ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಬೆಳಿಗ್ಗೆ ನಡೆದ ಕ್ರಿಕೆಟ್ ಪಂದ್ಯಾವಳಿಗೆ ಜೇಸೀ ಸ್ಥಾಪಕಾಧ್ಯಕ್ಷ ತೇಜಸ್ವಿ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಜೇಸೀ ಸಂಸ್ಥೆಯ ಅಧ್ಯಕ್ಷ ಮನೋಹರ್, ಕಾರ್ಯದರ್ಶಿ ರುಬೀನಾ ಎಂ.ಎ., ಮಾಜಿ ವಲಯಾಧ್ಯಕ್ಷೆ ಮಮತ, ಮಾಜೀ ಅಧ್ಯಕ್ಷರುಗಳಾದ ಗಿರೀಶ್, ನಾಗರಾಜು, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಇದರೊಂದಿಗೆ ಪಂದ್ಯಾಟದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಆಟಗಾರರಿಗೆ ವೈಯಕ್ತಿಕ ಬಹುಮಾನವನ್ನು ವಿತರಿಸಲಾಯಿತು.