ಕೂಡಿಗೆ, ಡಿ. 17: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಶಾಸಕರ ಅನುದಾನ ಹಾಗೂ ಕೊಡಗು ವಿಶೇಷ ಪ್ಯಾಕೇಜ್ ಅನುದಾನದ ಕಾಮಗಾರಿಗಳಿಗೆ ಕುಶಾಲನಗರ ಹೋಬಳಿ ವ್ಯಾಪ್ತಿಯ ಐದು ಗ್ರಾಮ ಪಂಚಾಯಿತಿಗಳಲ್ಲಿ ಭೂಮಿಪೂಜೆಯನ್ನು ನೆರವೇರಿಸಿದರು.

ಮುಳ್ಳುಸೋಗೆ ಗ್ರಾಮದಲ್ಲಿ ರೂ. 22 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಕೂಡಿಗೆ-ಕೊಪ್ಪಲು ಗ್ರಾಮದಿಂದ ಹಾರಂಗಿ ರಸ್ತೆ ತೆರಳುವ ಕಾಂಕ್ರೀಟ್ ರಸ್ತೆಯ ರೂ. 18 ಲಕ್ಷ ವೆಚ್ಚದ ಕಾಮಗಾರಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ರೂ. 18 ಲಕ್ಷ ವೆಚ್ಚದ ಉಪರಸ್ತೆ ಕಾಮಗಾರಿ, ಹೆಬ್ಬಾಲೆಯ ಬನಶಂಕರಿ ಅಮ್ಮನವರ ದೇವಾಲಯ ರಸ್ತೆಯ ರೂ. 18 ಲಕ್ಷ ವೆಚ್ಚದ ಕಾಮಗಾರಿ ಹಾಗೂ ತೊರೆನೂರು ಗ್ರಾಮದಲ್ಲಿ ರೂ. 18 ಲಕ್ಷ ವೆಚ್ಚದ ಕಾಮಗಾರಿ, ಶಿರಂಗಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 15 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಆಯಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಬಿಜೆಪಿಯ ವಿವಿಧ ಘಟಕದ ಪದಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಭು ಹಾಗೂ ಗುತ್ತಿಗೆದಾರರು ಇದ್ದರು.