ಶ್ರೀಮಂಗಲ, ಡಿ. 17: ಅಮ್ಮತ್ತಿ ಪಚ್ಚಾಟ್ ದೇವಯ್ಯಂಡ ಮಂದ್‍ನಲ್ಲಿ ಪುತ್ತರಿ ಮಂದ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಯುನೈಟೆಡ್ ಕೊಡವ ಅರ್ಗನೈಸೇಷನ್ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಎಲ್ಲಿ ಸಂಸ್ಕøತಿ ಕ್ಷೀಣಿಸುತ್ತದೋ ಅಲ್ಲಿ ವಿಕೃತಿ ತಾಂಡವವಾಡುತ್ತದೆ. ಸಮಾಜದ ಏಳಿಗೆಗೆ ಸಂಸ್ಕøತಿ ಅತ್ಯವಶ್ಯಕವಾಗಿದ್ದು ಅದನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ. ವಿಶ್ವದಲ್ಲೇ ಕೊಡವ ಸಂಸ್ಕøತಿ, ಆಚಾರ, ಪದ್ಧತಿ, ಪರಂಪರೆಗಳು ಶ್ರೇಷ್ಟತೆಯನ್ನು ಹೊಂದಿದ್ದು, ಅದನ್ನು ಪ್ರತಿಯೊಬ್ಬರು ಆಚರಣೆ ಮಾಡುವದರ ಮೂಲಕ ಉಳಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರ ಮಾಡುವಂತಾಗಬೇಕೆಂದು ತಿಳಿಸಿದರು.

ತಾ. 24, 25 ರಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ನಾಲ್ಕನೇ ವರ್ಷದ ಯುಕೊ ಮಂದ್ ನಮ್ಮೆ ಕಾರ್ಯಕ್ರಮ ನಡೆಯಲಿದೆ. ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಯುಕೊ ಸಂಘಟನೆ ಕೊಡವ ಮಂದ್ ನಮ್ಮೆಯನ್ನು ಆಯೋಜನೆ ಮಾಡುವದರ ಮೂಲಕ ಕೊಡವ ಸಮಾಜಗಳ ಒಗ್ಗಟ್ಟು ಹಾಗೂ ಬಾಂಧವ್ಯಕ್ಕೆ ವೇದಿಕೆಯನ್ನು ನಿರ್ಮಾಣ ಮಾಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಕೊಡವ ಸಮಾಜದ ವ್ಯಕ್ತಿ ಭಾಗವಹಿಸುವಂತಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಅಮ್ಮತ್ತಿ ಪಚ್ಚಾಟ್ ದೇವಯ್ಯ ಮಂದ್‍ನ ತಕ್ಕರಾದ ಸೋಮೆಯಂಡ ತಿಮ್ಮಯ್ಯ ಶಂಭು, ತೌಂದಾರಿ ಬೇರೆ ಮಹೇಂದ್ರ ರಂಜಿ, ಮಾಜಿ ತಕ್ಕ ಸೋಮೆಯಂಡ ದೇವಯ್ಯ ರಘು, ಹಾಗೂ ಸೋಮೆಯಂಡ, ಬೇರೆರ, ಪೊರ್ಕೋವಂಡ, ಚಂಬಂಡ, ದೇವಣಿರ, ಚಾರಿಮಂಡ, ಮಂಡೇಪಂಡ, ಮಚ್ಚಾರಂಡ, ಆಪಾಡಂಡ, ಕುಮ್ಮಂಡ, ಐಯ್ಯನೆರವಂಡ, ಮಚ್ಚೇಟಿರ ಕುಟುಂಬಸ್ಥರು ಭಾಗವಹಿಸಿದ್ದರು.