ಸುಂಟಿಕೊಪ್ಪ, ಡಿ. 17: ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಬಾಂಧವರು ನಗರದ ಪ್ರಮುಖ ಬೀದಿಗಳಲ್ಲಿ ಸೌಹಾರ್ದತೆಯ ಸಂದೇಶ ಸಾರುತ್ತಾ ಮೆರವಣಿಗೆ ನಡೆಸಿದರು. ಚೆಂದದ ದೇಶ ಸೊಬಗಿನ ನಾಡು, ಹುಟ್ಟಿದ ದೇಶ ಪ್ರೀತಿಸುವದು ಅನಿವಾರ್ಯ” ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲಾ ಧರ್ಮದ ಉದ್ದೇಶ ಶಾಂತಿ ಭಾವೈಕ್ಯತೆ ಉಳಿಸಿ ಬೆಳೆಸುವದೇ ಆಗಿದೆ ಎಂದು ಧ್ವನಿವರ್ಧಕದಲ್ಲಿ ಘೋಷಿಸುತ್ತಾ ಮೆರವಣಿಗೆ ಸಾಗಿದರು.

ಮುಸ್ಲಿಂ ಬಾಂಧವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೆರವಣಿಗೆಗೆ ಸಾಥ್ ನೀಡಿದರು. ಸುಂಟಿಕೊಪ್ಪ ಸುನ್ನಿ ಶಾಫಿ ಜುಮ್ಮ ಮಸೀದಿ ಹನಫಿ ಜಮಾಅತ್ ಹಾಗೂ ಸುನ್ನಿ ಮುಸ್ಲಿಂ ಜಮಾಅತ್ ವತಿಯಿಂದ ಈದ್ ಮಿಲಾದ್ ಸಂಭ್ರಮ ಆಚರಿಸಲಾಯಿತು.

ನಂತರ ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜೈನುದ್ದೀನ್ ಫೈಜಿ, ಅಬ್ದುಲ್ ಸಿದ್ಧಿಕ್ ಉಸ್ತಾದ್ ಮಾತನಾಡಿ, ಪ್ರೀತಿಯ ಸಾಮ್ರಾಜ್ಯದಿಂದ ಬದುಕನ್ನು ಕಟ್ಟಿಕೊಂಡರೆ ಸಮಾಜದಲ್ಲಿ ಶಾಂತಿ ಸಹಭಾಳ್ವೆ ನೆಲೆಸಲಿದೆ. ಮತಾಂತರ, ಭಯೋತ್ಪಾದನೆಗೆ, ಮುಸ್ಲಿಂ ಧರ್ಮದಲ್ಲಿ ಅವಕಾಶವಿಲ್ಲ. ಶಾಂತಿ ಸೌಹಾರ್ಧತೆಯಿಂದ ದೇಶದ ಒಗ್ಗಟ್ಟಿಗೆ ಮುಸ್ಲಿಂ ಬಾಂಧವರು ಕೈಜೋಡಿಸಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಮುಸ್ಲಿಂ ಸಮಾಜದ ಅಧ್ಯಕ್ಷರೂ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾತನಾಡಿ, ಭಾರತ ದೇಶದಲ್ಲಿರುವ 100 ಕೋಟಿ ಹಿಂದೂಗಳು ಮತ್ತು ಮುಸ್ಲಿಂಮರು ಒಂದೇ ತಾಯಿಯ ಮಕ್ಕಳಂತೆ ಪ್ರೀತಿ ವಾತ್ಸಲ್ಯದಿಂದ ಬದಕಲು ಮುಂದಾಬೇಕು ಎಂದರು.

ಸುಂಟಿಕೊಪ್ಪದ ಇಮಾಮ್ ಸುನ್ನಿ ಶಾಫಿ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಉಸ್ಮಾನ್ ಫೈಜಿ, ಶರಿಯಾತ್ ಜೂನಿಯರ್ ಕಾಲೇಜಿನ ಸದಸ್ಯ ಹಮೀದ್ ಮೌಲವಿ, ಕೇರಳ ವಲ್ಲಪುಜಾದ ಎಸ್‍ವೈಎಸ್‍ನ ಪ್ರಧಾನ ಕಾರ್ಯದರ್ಶಿ ಸಲಾಹುದ್ದೀನ್ ಫೈಜಿ, ಸುಂಟಿಕೊಪ್ಪ ಸುನ್ನಿಹನಫಿ ಮದರಸದ ಆಹ್ಮದ್ ಹಫೀಜ್ ಖಾಜಿ ಮೌಲನಾ, ಕರ್ನಾಟಕ ಎಸ್‍ವೈಎಸ್‍ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಕಮಿಲ್ ಸಖಾಫಿ, ಸುಂಟಿಕೊಪ್ಪ ಸುನ್ನಿ ಶಾಫಿ ಜುಮ್ಮಾ ಮಸೀದಿಯ ಉಸ್ಮಾನ್ ಫೈಜಿ, ಸುಂಟಿಕೊಪ್ಪ ಮುಸ್ಲಿಂ ಜುಮ್ಮಾ ಮಸೀದಿಯ ರಫೀಕ್ ಸುಹಾದಿಗದ್ದೆಹಳ್ಳ ನೂರೂಲ್ಲಾ ಇಸ್ಲಾಂ ಜಮಾಅತ್‍ನ ಉಸ್ಮಾನ್ ಸಖಾಫಿ, ಸುಂಟಿಕೊಪ್ಪ ಸುನ್ನಿ ಶಾಫಿ ಜಮ್ಮಾ ಮಸೀದಿಯ ಹಸನ್ ಕುಂಞ ಹಾಜಿ, ಸುನ್ನಿ ಹನಫಿ ಜಮಾಅತ್ ಅಧ್ಯಕ್ಷ ಲತೀಫ್, ಗದ್ದೆಹಳ್ಳದ ನೂರೂಲ್ಲಾ ಇಸ್ಲಾಂ ಜಮಾಅತ್ ಅಧ್ಯಕ್ಷ ಬಶೀರ್ ಹಾಜಿ, ಈದ್‍ಮಿಲಾದ್ ಸಮಿತಿಯ ಕೆ.ಎ. ಉಸ್ಮಾನ್, ಇಕ್ಬಾಲ್, ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಇದ್ದರು.