ಮಡಿಕೇರಿ, ಡಿ.17: ದೇಶ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದಿದ್ದರೂ ರಾಷ್ಟ್ರದ ನಿವಾಸಿಗಳು ನೈಜ ಸ್ವಾತಂತ್ರ್ಯವಾಗಲಿ, ಸಮಾನತೆಯಾಗಲೀ ಅನುಭವಿಸುತ್ತಿಲ್ಲ. ರಾಷ್ಟ್ರವಾಸಿಗಳೆಲ್ಲರೂ ತಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಇವು ಜನರ ಸ್ವಾತಂತ್ರ್ಯವನ್ನಾಗಲಿ ಸಮಾನತೆಯನ್ನಾಗಲಿ ಖಾತರಿಪಡಿಸುತ್ತಿಲ್ಲ ಎನ್ನುವದು ದುಃಖಕರ ಬೆಳವಣಿಗೆಯಾಗಿದೆ ಎಂದು ಎಸ್‍ಐಓ ರಾಷ್ಟ್ರೀಯ ಅಧ್ಯಕ್ಷ ನಹಾಸ್ ಎ.ಹೆಚ್. ಅಭಿಪ್ರಾಯಪಟ್ಟಿದ್ದಾರೆ. ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾದ ಕೊಡಗು ಜಿಲ್ಲಾ ಘಟಕದಿಂದ ಆಯೋಜಿತ ‘ಹಲವು ಧರ್ಮ, ಒಂದು ಭಾರತ’ ಸೌಹಾರ್ದ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಕೇವಲ ಭೌಗೋಳಿಕ ನೆಲೆಗೆ ಸೀಮಿತವಾಗಿ ನಾವೆಲ್ಲ ಒಂದಾಗಿರುವದಕ್ಕೆ ಹೆಚ್ಚಿನ ಮಹತ್ವ ನೀಡಲಾಗದು. ಬದಲಾಗಿ ಎಲ್ಲಾ ಧರ್ಮ, ಜಾತಿ, ಸಂಸ್ಕøತಿಗಳನ್ನು ಸಮಾನವಾಗಿ ಕಾಣುವ ಮತ್ತು ಗೌರವಿಸುವ ಮೂಲಕ ಸೌಹಾರ್ದತೆ ಹಾಗೂ ಏಕತೆಯನ್ನು ಕಾಣಲು ಸಾಧ್ಯ. ಜಾತಿ, ಧರ್ಮಗಳನ್ನು ಮೀರಿ ಎಲ್ಲರೂ ಸಮಾನರು ಎನ್ನುವ ಪರಿಕಲ್ಪನೆ ಜಾರಿಯಾದಾಗ ಮಾತ್ರ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ನಿಜ ಅರ್ಥ ದೊರಕುತ್ತದೆಂದು ಅಭಿಪ್ರಾಯಪಟ್ಟರು.

ಸಮಾವೇಶವನ್ನು ಮಡಿಕೇರಿಯ ಶಾಂತಿ ಚರ್ಚ್‍ನ ರೆ||.ಫಾ. ಅಮೃತರಾಜ್ ಉದ್ಘಾಟಿಸಿ ಮಾತನಾಡಿ ಸ್ವಾರ್ಥ, ಅಹಂ ಮತ್ತು ಕೀಳರಿಮೆಯ ನಕಾರಾತ್ಮಕ ಧೋರಣೆಗಳನ್ನು ತೊರೆದು ನಾವೆಲ್ಲರು ಒಂದೇ ಎನ್ನುವ ಸೌಹಾರ್ದ ಮನೋಭಾವವನ್ನು ಕಂಡು ಕೊಂಡಾಗ ಮಾತ್ರ ಕೋಮು ಸೌಹಾರ್ದತೆಯ ಸುಂದರ ಸಮಾಜವನ್ನು ಕಾಣಲು ಸಾಧ್ಯ ಎಂದರು.

ಪ್ರಗತಿಪರ ಚಿಂತಕ ವಿ.ಪಿ.ಶಶಿಧರ್ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಎನ್ನುವದು ರಾಷ್ಟ್ರೀಯ ಮಂತ್ರವಾಗಿದೆ. ಧರ್ಮವೆನ್ನುವದು ರಾಜಕೀಯದೊಂದಿಗೆ ಮಿಳಿತವಾಗಿ ಅಧಿಕಾರಕ್ಕೇರುವ ದಾರಿಯಾಗಿ ಪರಿಣಮಿಸಿದೆ ಎಂದ ಅವರು ಜಾತ್ಯಾತೀತ ಸಮಾಜ ನಿರ್ಮಾಣ ನಮ್ಮೆಲ್ಲರ ಉದ್ದೇಶವಾಗಲಿ ಎಂದರು.

ಎಸ್‍ಐಓ ರಾಜ್ಯಾಧ್ಯಕ್ಷ ಮೊಹಮ್ಮದ್ ರಫೀಕ್ ಬೀದರ್ ಮಾತನಾಡಿ, ಹಲವು ಧರ್ಮ ಒಂದು ಭಾರತವೆನ್ನುವ ಸೌಹಾರ್ದಯುತ ಸಮಾಜ ನಿರ್ಮಾಣ ಕೇವಲ ಒಂದು ಸಮೂಹದಿಂದ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವದು ಅತ್ಯವಶ್ಯ. ಎಸ್‍ಐಓ ಸಂಘಟನೆ ವಿದ್ಯಾರ್ಥಿ ಸಮೂಹವನ್ನು ಈ ನಿಟ್ಟಿನಲ್ಲಿ ಜಾಗೃತಗೊಳಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆಯೆಂದು ತಿಳಿಸಿದರು.

ವೇದಿಕೆಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ವಿ.ಶಿವಮಲ್ಲಯ್ಯ, ದಸಂಸ ಪ್ರಮುಖರಾದ ರಾಜು, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಮುಹೀನಾ ಮುಹಮ್ಮದ್, ಜಿ.ಐ.ಓ ರಾಜ್ಯ ಸಲಹಾ ಸಮಿತಿ ಸದಸ್ಯೆ ಹಿಬಾ ಶಿರಿನ್, ಜಮಾಅತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲಾ ಸಂಚಾಲಕ ಸಿ.ಹೆಚ್.ಅಫ್ಸರ್ ಉಪಸ್ಥಿತರಿದ್ದರು. ಸೋಲಿಡಾರಿಟಿ ಯೂತ್ ಮೂವ್‍ಮೆಂಟ್‍ನ ರಾಜ್ಯ ಸಲಹಾ ಸಮಿತಿ ಸದಸ್ಯ ಎಂ. ಶೌಕತ್ ಅಲಿ ಸಮಾರೋಪ ಭಾಷಣ ನೆರವೇರಿಸಿದರು. ಎಸ್‍ಐಓ ರಾಜ್ಯ ಸಲಹಾ ಸಮಿತಿ ಸದಸ್ಯ ಯಾಸೀನ್ ಕೋಡಿ ಬೆಂಗ್ರೆ ಸ್ವಾಗತಿಸಿ, ಎಸ್‍ಐಓ ರಾಜ್ಯ ಕಾರ್ಯದರ್ಶಿ ಅಝರುದ್ದೀನ್ ಪಿ.ಎ. ವಂದಿಸಿದರೆ, ಕೆ.ಟಿ.ಬಷೀರ್ ನಿರೂಪಿಸಿದರು. ಅದಕ್ಕೂ ಮುಂಚೆ ನಗರಕ್ಕೆ ಆಗಮಿಸಿದ ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷ ನಹಾಸ್ ಅವರನ್ನು ಕಾರ್ಯಕರ್ತರು ಜನರಲ್ ತಿಮ್ಮಯ್ಯ ವೃತ್ತದ ಬಳಿ ಭವ್ಯ ಸ್ವಾಗತ ನೀಡಿ ಮೆರವಣಿಗೆಯಲ್ಲಿ ಕಾವೇರಿ ಕಲಾಕ್ಷೇತ್ರಕ್ಕೆ ಕರೆ ತಂದರು.