ಸಿದ್ದಾಪುರ, ಡಿ. 17: ಹಾಡುಹಗಲಲ್ಲೇ ಕಾಡಾನೆ ಹಿಂಡು ಮುಖ್ಯರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ವಾಹನ ಚಾಲಕರು ಸೇರಿದಂತೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇಂಜಿಲಗೆರೆ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಿಂಡುಗಳು ಬೀಡುಬಿಟ್ಟಿದ್ದು, ಭಾನುವಾರ ಬೆಳಗ್ಗಿನಿಂದ ಕಾಫಿ ತೋಟಗಳಲ್ಲಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಿ ಓಡಿಸಿದೆ. ಈ ಸಂದರ್ಭ ಸುಮಾರು 19 ಕಾಡಾನೆಗಳಿದ್ದ ಹಿಂಡು ಹಾಡಹಗಲಲ್ಲೇ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ಬಳಿಕ ರಸ್ತೆಯನ್ನು ದಾಟಿ ಮತ್ತೊಂದು ತೋಟಕ್ಕೆ ತೆರಳಿದೆ. ಕಾಡಾನೆಗಳ ಹಿಂಡು ರಸ್ತೆಯನ್ನು ದಾಟುವ ಕೆಲವೇ ಕ್ಷಣಗಳಲ್ಲಿ ಕೆಲವು ವಾಹನಗಳು ಸಂಚರಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಡಾನೆಗಳ ಹಿಂಡು ಮತ್ತೆ ಇಂಜಿಲಗೆರೆ ವ್ಯಾಪ್ತಿಯಲ್ಲೇ ಬೀಡುಬಿಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಗಳನ್ನು ಕೂಡಲೇ ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾ.ಪಂ ಉಪಾಧ್ಯಕ್ಷ ನಿತೀಶ್ ಮಾತನಾಡಿ, ಕಾಡಾನೆಗಳ ಹಿಂಡು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿದ್ದು, ಕಾರ್ಮಿಕರು, ವಿದ್ಯಾರ್ಥಿ ಗಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಕಾಡಾನೆಗಳನ್ನು ಕಾಡಿಗಟ್ಟಬೇಕು ಎಂದು ಒತ್ತಾಯಿಸಿದರು.

ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖಾದಿಕಾರಿಗಳು ಹಾಗೂ ಆರ್.ಆರ್.ಟಿ ತಂಡ ಪ್ರಯತ್ನಿಸುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ದೇವಯ್ಯ ತಿಳಿಸಿದ್ದಾರೆ. ಈ ಸಂದರ್ಭ ಅರಣ್ಯ ಇಲಾಖೆಯ ಸಿಬ್ಬಂದಿ ಗಣೇಶ್ ಸೇರಿದಂತೆ ಆರ್.ಆರ್.ಟಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಎ.ಎನ್ ವಾಸು