ಗೋಣಿಕೊಪ್ಪಲು, ಡಿ. 18: ದಕ್ಷಿಣ ಕೊಡಗಿನ ಕುರ್ಚಿ ಗ್ರಾಮದ ರೈತರು ಬೆಳೆದಿದ್ದ ಭತ್ತದ ಗದ್ದೆಗಳಿಗೆ ಹಾಗೂ ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿರುವ ಕಾಡಾನೆಯ ಹಿಂಡು ಬೆಳೆದು ನಿಂತಿದ್ದ ಭತ್ತ ಹಾಗೂ ಕಾಫಿ ಫಸಲನ್ನು ಸಂಪೂರ್ಣ ಹಾಳು ಮಾಡಿ ಲಕ್ಷಾಂತರ ಬೆಳೆ ಫಸಲು ರೈತ ಕಳೆದುಕೊಂಡು ಕಂಗಲಾಗಿದ್ದಾರೆ. ಕುರ್ಚಿ ಗ್ರಾಮದ ರೈತರಾದ ವಿಧವೆ ಮಹಿಳೆ ಅಜ್ಜಮಾಡ ಪೊನ್ನಮ್ಮ ಎಂಬವರು ತಮ್ಮ ಮೂರು ಎಕರೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ರಾತ್ರಿ ವೇಳೆಯಲ್ಲಿ ಕಾಡಾನೆಯ ಹಿಂಡು ಸಂಪೂರ್ಣವಾಗಿ ಹಾಳು ಮಾಡಿದ್ದು ಗದ್ದೆಯಲ್ಲಿ ಕಾಡಾನೆಗಳು ತೀವ್ರತರವಾದ ದಾಂಧಲೆ ನಡೆಸಿವೆ. ಬೆಳಿಗ್ಗೆ ಗದ್ದೆಗೆ ತೆರಳುವಾಗ ಮಹಿಳೆಗೆ ಈ ವಿಷಯ ತಿಳಿದು ಸಮೀಪದವರೆಗೆ ಮಾಹಿತಿ ನೀಡಿದ್ದಾರೆ.
ಮೂರು ಕಿ.ಮೀ.ದೂರದ ವೆಸ್ಟ್ ನೆಮ್ಮಲೆ ಗ್ರಾಮಕ್ಕೆ ತೆರಳಿರುವ ಈ ಕಾಡಾನೆಯ ಹಿಂಡು ಅಲ್ಲಿಯ ರೈತರಾದ ಮಾಣೀರ ಪಿ.ಅಯ್ಯಪ್ಪನವರ 5 ಎಕರೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ಕೂಡ ಸಂಪೂರ್ಣ ಹಾಳು ಮಾಡಿದೆ. ಕುರ್ಚಿ ಗ್ರಾಮದಲ್ಲಿರುವ ರೈತರಾದ ಅಜ್ಜಮಾಡ ಶಂಕರು ನಾಚಪ್ಪ, ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಪ್ರಮೋದ್, ಅಜ್ಜಮಾಡ ಮಂದಣ್ಣ, ಅಜ್ಜಮಾಡ ಕುಶಾಲಪ್ಪ, ಅಜ್ಜಮಾಡ ಜೀವನ್, ಪೂಣಚ್ಚ,ಜಯ,ಹ್ಯಾರಿ,ಮಾಣೀರ ಸಂಜು ಇವರ ಕಾಫಿ,ಅಡಿಕೆ ತೋಟಕ್ಕೆ ದಾಂಧಲೆ ನಡೆಸಿದ ಕಾಡಾನೆಗಳು ತೋಟದ ಬೆಳೆಗಳನ್ನು ನಷ್ಟ ಪಡಿಸಿವೆ.
ಸುದ್ದಿ ತಿಳಿಯುತ್ತಿದ್ದಂತೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್, ಮಡಿಕೇರಿಯ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಸೀಮಾರವರನ್ನು ಹಾಗೂ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು. ಇವರ ಮನವಿಯ ಮೇರೆಗೆ ಮಡಿಕೇರಿಯಿಂದ ಆಗಮಿಸಿದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬೆಳೆ ಕಳೆದುಕೊಂಡಿರುವ ರೈತರಿಗೆ ಕೂಡಲೇ ನಷ್ಟ ಪರಿಹಾರದ ಬಗ್ಗೆ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು. ಸ್ಥಳದಲ್ಲೆ ಮಹಜರು ನಡೆಸಿದ ಅರಣ್ಯಾಧಿಕಾರಿಗಳು ನಷ್ಟ ಪರಿಹಾರವನ್ನು ಭರಿಸುವ ನಿಟ್ಟಿನಲ್ಲಿ ರೈತರೊಂದಿಗೆ ನಾವು ಕೈ ಜೋಡಿಸುತ್ತೇವೆ ಎಂದರು. ಕಳೆದ ಹಲವು ದಿನಗಳಿಂದ ಕಾಡಾನೆಯ ಹಿಂಡು ಈ ಭಾಗದಲ್ಲಿ ಬೀಡು ಬಿಟ್ಟಿದ್ದು ಯಾವದೇ ಭಯವಿಲ್ಲದೆ ರೈತರು ಬೆಳೆದ ಬೆಳೆಗಳನ್ನು ನಾಶ ಪಡಿಸುತ್ತಿವೆ. ಬೆದರಿಕೆಯ ಗುಂಡಿನ ಶಬ್ದಕ್ಕೆ ಕಾಡಾನೆಗಳು ಕದಲುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಅರಣ್ಯಧಿಕಾರಿಗಳ ಮುಂದೆ ತೋಡಿಕೊಂಡರು. ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ, ಬಾಚಮಾಡ ಭವಿ ಕುಮಾರ್ ಐಯ್ಯಮಾಡ ಹ್ಯಾರಿ ಸೋಮೇಶ್, ಮಚ್ಚಮಾಡ ರಂಜಿ, ಅಜ್ಜಮಾಡ ಮೋಹನ್, ಸಿದ್ದು, ಪ್ರದೀಪ್, ಲಾಲಾ, ಬೊಳ್ಳು, ಜೀವನ್, ಮಧು, ಮಂದಣ್ಣ, ಚೆಂಗುಲಂಡ ರಾಜಪ್ಪ, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಗಂಗಾಧರ್, ಅರಣ್ಯ ಸಿಬ್ಬಂದಿಗಳಾದ ಮನೋಹರ್, ಹರೀಶ್, ಪ್ರೇಮ್ನಾಥ್, ಮುಂತಾದವರು ಹಾಜರಿದ್ದರು.
-ಹೆಚ್.ಕೆ. ಜಗದೀಶ್