ಮಡಿಕೇರಿ, ಡಿ. 18: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಬಾರ ಉಪನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಮ್ತಾಜ್ ಅವರಿಂದ ಜವಾಬ್ದಾರಿ ಹಿಂಪಡೆಯಲಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.

ಮಮ್ತಾಜ್ ಸ್ಥಾನಕ್ಕೆ ಕೂಡಿಗೆ ಡಯಟ್ ಹಿರಿಯ ಉಪನ್ಯಾಸಕ ಮಲ್ಲೇಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಮಮ್ತಾಜ್ ಬಾಲಕಿಯರ ಸಂರಕ್ಷಣಾ ಅಧೀಕ್ಷಕರಾಗಿದ್ದು, ಪ್ರಬಾರ ಉಪನಿರ್ದೇಶಕಿಯಾಗಿದ್ದರು. ಅಂಗನವಾಡಿಗಳಿಗೆ ಪಡಿತರ ಪೂರೈಕೆ ಜವಾಬ್ದಾರಿಯನ್ನು ಮಡಿಕೇರಿಯ ಜನತಾ ಬಜಾರ್‍ಗೆ ನೀಡುವಂತೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡು ನಿರ್ಣಯ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಬದಲಾಯಿಸುವಂತೆ ಜಿ.ಪಂ. ಅಧ್ಯಕ್ಷರು ಸಿಇಓಗೆ ಲಿಖಿತ ಮನವಿ ಸಲ್ಲಿಸಿದ್ದರು.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಅಂಗನವಾಡಿಗಳಿಗೆ ಪಡಿತರ ಪೂರೈಕೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ತಾಲೂಕು ಶಿಶು ಕಲ್ಯಾಣಾಧಿಕಾರಿ ಜಿಲ್ಲಾಧಿಕಾರಿಗೆ ತನಿಖಾ ವರದಿ ಸಲ್ಲಿಸಿದ್ದರು. ಈ ಬಗ್ಗೆ ಮಾಧ್ಯಮಗಳಿಗೆ ವರದಿ ನೀಡಲಾಗಿದೆ ಎಂಬ ಕಾರಣಕ್ಕಾಗಿ ಸಿಡಿಪಿಒಗೆ ಮಮ್ತಾಜ್ ನೋಟಿಸ್ ಜಾರಿ ಮಾಡಿದ್ದರು.