ಮಡಿಕೇರಿ, ಡಿ. 18: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಶೈಕ್ಷಣಿಕ ಸಮ್ಮೇಳನ ಮತ್ತು ವಿಚಾರಗೋಷ್ಠಿ ತಾ. 20 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿದ್ದು, ಈ ಸಂದರ್ಭ ವಿವಿಧ ಭೇಡಿಕೆಗಳನ್ನು ಸರ್ಕಾರದ ಮುಂದಿಡುವದಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಮನ್ವಯ ವೇದಿಕೆ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕೆ.ಎ. ನಾಗೇಶ್, ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸುವ ಅಗತ್ಯವಿದೆ ಎಂದರು. ರಾಜ್ಯವ್ಯಾಪಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ಶಾಲೆಗಳು ಮುಚ್ಚಲ್ಪಟ್ಟಿವೆ. ಈ ಶಾಲೆಗಳನ್ನು ಮತ್ತೆ ಆರಂಭಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದೆಂದರು. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಶಿಕ್ಷಕರಿಗೆ ಬೋಧನೆಯನ್ನು ಹೊರತುಪಡಿಸಿದ ಇತರೆ ಯಾವದೇ ಕೆಲಸ ಕಾರ್ಯಗಳನ್ನು ನೀಡಬಾರದು, ಆರ್‍ಟಿಇ ಪದ್ಧತಿಯಡಿ ಖಾಸಗಿ ಶಾಲೆಗಳಿಗೆ ಸರ್ಕಾರ ಶುಲ್ಕ ಭರಿಸುವದನ್ನು ನಿಲ್ಲಿಸಬೇಕು. ಅದೇ ಹಣದಿಂದ ಸರ್ಕಾರಿ ಶಾಲೆಗಳನ್ನು ಸಬಲೀಕರಗೊಳಿಸಬೇಕು. ಖಾಸಗಿ ಶಾಲೆಗಳ ವ್ಯಾಪಾರೀಕರಣದ ಕ್ರಮವನ್ನು ನಿಯಂತ್ರಿಸಬೇಕು, ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕೆಂದು ಆದೇಶಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವದೆಂದ ನಾಗೇಶ್, ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲಾ ಶಾಲಾಭಿವೃದ್ಧಿ ಸಮಿತಿಯ ಪ್ರಮುಖರು ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ಹೆಚ್.ಆರ್. ತುಳಸಿ, ಸಮಿತಿಯ ಸೋಮವಾರಪೇಟೆ ಅಧ್ಯಕ್ಷ ಜಿ.ವಿ. ಸಿದ್ಧಲಿಂಗಪ್ಪ, ಸಂಘÀಟನಾ ಕಾರ್ಯದರ್ಶಿ ಮೋಹನ್ ಎನ್.ವಿ., ಮಡಿಕೆÉೀರಿ ತಾಲೂಕು ಅಧ್ಯಕ್ಷ ದೇವಂಗೋಡಿ ಸಿ. ರಾಮಚಂದ್ರ ಹಾಗೂ ಕಾರ್ಯದರ್ಶಿ ಎಂ.ಟಿ. ಹೇಮಾವತಿ ಉಪಸ್ಥಿತರಿದ್ದರು.