ಮಡಿಕೇರಿ, ಡಿ. 18: ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಸರಕಾರಿ ನಾಲೆ ಒತ್ತುವರಿ ಮಾಡಿರುವದನ್ನು ತಾ. 22 ರೊಳಗೆ ತೆರವುಗೊಳಿಸುವಂತೆ ಡಾಲಿ ಚಂಗಪ್ಪ, ಸಿ.ಕೆ. ಕಾರ್ಯಪ್ಪ, ಪೆಮ್ಮಂಡ ರಾಜ, ಚಟ್ರಂಡ ವಿಜು ಗಣಪತಿ, ಬಾದುಮಂಡ ಪಿ. ಗಣಪತಿ, ಶಾರದ, ಎಂ.ಎಂ. ಚಂಗಪ್ಪ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.

ಸರ್ವೆ ನಂಬರ್ 193/3 ಎ ಮತ್ತು 197/1ರಲ್ಲಿ ಸರಕಾರಿ ನಾಲೆ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಪುಗ್ಗೆರ ರೇವತಿ ಈ ಬಗ್ಗೆ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು. 30.6.2014ರ ಸರ್ವೆಯಲ್ಲಿ ಒತ್ತುವರಿ ಪತ್ತೆಹಚ್ಚಿ, ಒತ್ತುವರಿ ಖಾತ್ರಿ ಮಾಡಲಾಗಿತ್ತು. 11.12.2017 ರಂದು ಒತ್ತುವರಿ ಜಾಗದ ಗಡಿ ಗುರುತಿಸಲಾಗಿದೆ.

ನ್ಯಾಯಾಲಯದ ಆದೇಶದನ್ವಯ ಒಂದು ವಾರದೊಳಗೆ ಒತ್ತುವರಿ ತೆರವುಗೊಳಿಸಿ ವರದಿ ಸಲ್ಲಿಸಬೇಕಾಗಿರುವದರಿಂದ ಸರ್ವೆಯಿಂದ ಗುರುತಿಸಲಾದ ಒತ್ತುವರಿ ಜಾಗ ಮತ್ತು ಜಾಗದ ಮೇಲಿರುವ ಚರಾಸ್ತಿಯನ್ನು ತಾ. 22ರೊಳಗೆ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಸರಕಾರದ ನಿಯಮಾನುಸಾರ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.