ಗೋಣಿಕೊಪ್ಪ ವರದಿ, ಡಿ. 18 : ಪುತ್ತರಿ ಪ್ರಯುಕ್ತ ಕುಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೊಟ್ಯತ್‍ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಪ್ರಥಮ ವರ್ಷದ ಫುಟ್ಬಾಲ್ ಕಪ್‍ನಲ್ಲಿ ಕುಂದ ಇಲೆವೆನ್ ತಂಡ ಚಾಂಪಿಯನ್, ಪಾಲಿಬೆಟ್ಟ ನೆಹರು ತಂಡವು ರನ್ನರ್ ಅಪ್ ಸ್ಥಾನ ಅಲಂಕರಿಸಿದೆ.
ಕುಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕುಂದ ತಂಡವು 3-0 ಗೋಲುಗಳ ಮೂಲಕ ಮಣಿಸುವ ಮೂಲಕ ಚಾಂಪಿಯನ್ ಸ್ಥಾನ ಅಲಂಕರಿಸಿತು.
ಸೆಮಿಫೈನಲ್‍ನಲ್ಲಿ ಕುಂದ ಇಲೆವೆನ್ ತಂಡವು ರೊಸೋರಿಯಸ್ ಬಿ ತಂಡದ ವಿರುದ್ಧ 3-2 ಗೋಲುಗಳ ರೋಚಕ ಗೆಲುವು ದಾಖಲಿಸಿ ಫೈನಲ್ ಪ್ರವೇಶ ಪಡೆಯಿತು. ಎರಡನೇ ಸೆಮಿಯಲ್ಲಿ ಪಾಲಿಬೆಟ್ಟ ನೆಹರು ತಂಡವು ಸ್ಕಿಪ್ಪರ್ಸ್ ತಂಡವನ್ನು 4-3 ಗೋಲುಗಳ ಮೂಲಕ ಟೈಬ್ರೇಕರ್‍ನಲ್ಲಿ ಮಣಿಸಿತು. ಪಂದ್ಯದ ಅವಧಿಯಲ್ಲಿ ಉಭಯ ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿ, ಟೈಬ್ರೇಕರ್‍ಗೆ ಪಂದ್ಯವನ್ನು ಕೊಂಡೊಯ್ಯುವಂತೆ ಮಾಡಿತು.
ಕ್ವಾರ್ಟರ್ ಫೈನಲ್‍ನಲ್ಲಿ ಕುಂದ ಇಲೆವೆನ್ ತಂಡವು ಅಮ್ಮತ್ತಿ ಮಿಲನ್ಸ್ ವಿರುದ್ಧ 1-0 ಗೋಲುಗಳಿಂದ ಗೆಲುವು ಸಾಧಿಸಿತು. ಪಾಲಿಬೆಟ್ಟ ನೆಹರು ತಂಡವು ಹಾಲುಗುಂದ ವಿರುದ್ಧ 6-1 ಗೋಲುಗಳಿಂದ ಜಯಿಸಿತು. ಸ್ಕಿಪ್ಪರ್ಸ್ ತಂಡವು ರೊಸಾರಿಯೋ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು. ಪಾಲಿಬೆಟ್ಟ ನೆಹರು ತಂಡವು ಎವೈಸಿ ಗೋಣಿಕೊಪ್ಪ ವಿರುದ್ಧ 2-0 ಗೋಲುಗಳಿಂದ ಗೆಲುವು ಪಡೆಯಿತು.
ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಮಣಿ ಪಡೆದುಕೊಂಡರು. ಉತ್ತಮ ಆಟಗಾರನಾಗಿ ಗಣೇಶ್ ಪ್ರಶಸ್ತಿ ಪಡೆದರು.
ಈ ಸಂದರ್ಭ ಬೊಟ್ಯತ್‍ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ದಾನಿಮನೆಯಪಂಡ ಗಣಪತಿ, ಪಟ್ರಂಗಡ ಧನಿ ಗಂಗಮ್ಮ, ಅರ್ವತೋಕ್ಲು ಗ್ರಾ. ಪಂ ಸದಸ್ಯ ಮನೆಯಪಂಡ ಪ್ರಾಣ್ ಬೋಪಣ್ಣ, ಬೊಟ್ಯತ್‍ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮದ್ರೀರ ಹರೀಶ್, ನಿರ್ದೇಶಕ ಮದ್ರೀರ ಗಣಪತಿ ಬಹುಮಾನ ವಿತರಿಸಿದರು.