ಸೋಮವಾರಪೇಟೆ, ಡಿ. 18: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಸೀತಾರಾಂ ಅವರ ಎದುರಲ್ಲೇ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತಾಲೂಕು ತಹಶೀಲ್ದಾರ್ ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಭಾ ಕಾರ್ಯಕ್ರಮ ಆರಂಭಕ್ಕಾಗಿ ವೇದಿಕೆಗೆ ಹತ್ತುತ್ತಿದ್ದಂತೆ ತಹಶೀಲ್ದಾರ್ ಮಹೇಶ್ ಅವರನ್ನು ಕಂಡ ಶಾಸಕರು ಫುಲ್ ಗರಂ ಆದರು. ‘ಬಡವರಿಂದ ಹಣ ಪಡೆದು ಹಕ್ಕುಪತ್ರ ವಿತರಿಸುತ್ತಿದ್ದೀರಾ? ಹಣ ನೀಡದ ಬಡವರ ಅರ್ಜಿಗಳನ್ನು ಪೆಂಡಿಂಗ್ ಇಟ್ಟಿದ್ದೀರಾ?’ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಉಸ್ತುವಾರಿ ಸಚಿವರು, ‘ಈ ಬಗ್ಗೆ ಮತ್ತೆ ಮಾತನಾಡುವ; ಮೊದಲು ಕಾರ್ಯಕ್ರಮ ಪ್ರಾರಂಭಿಸುವ’ ಎಂದು ಶಾಸಕರನ್ನು ಸಮಾಧಾನ ಪಡಿಸಿದರು. ಆದರೂ ಕೆಲ ನಿಮಿಷಗಳ ಕಾಲ ಶಾಸಕ ರಂಜನ್ ಅವರು ತಹಶೀಲ್ದಾರ್‍ನ್ನು ಎಲ್ಲರೆದುರೇ ತರಾಟೆಗೆ ತೆಗೆದುಕೊಂಡರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಸಂದರ್ಭವೂ ಸಹ ತಹಶೀಲ್ದಾರ್ ವಿರುದ್ಧ ಶಾಸಕರ ಆರೋಪ ಕಡಿಮೆಯಾಗಿರಲಿಲ್ಲ. ತಮ್ಮ ಮಾತಿನುದ್ದಕ್ಕೂ ತಹಶೀಲ್ದಾರ್ ವಿರುದ್ಧ ಆರೋಪಗಳ ಸುರಿಮಳೆಗೈದರು. ‘ಅಕ್ರಮ ಸಕ್ರಮ ಸಮಿತಿಯ ಸಭೆ ವಾರಕ್ಕೆ ಎರಡು ಬಾರಿ ಆಯೋಜಿಸಿದರೂ ಅರ್ಜಿಗಳನ್ನು ತಹಶೀಲ್ದಾರ್ ಇಡುತ್ತಿಲ್ಲ. ಒಂದು ಸಭೆಗೆ ಕೇವಲ 35 ಅರ್ಜಿಗಳನ್ನು ಮಾತ್ರ ಇಡುತ್ತಿದ್ದಾರೆ. 94 ಸಿ, 94 ಸಿಸಿ ಹಾಗೂ ಫಾರಂ 50 ಹಾಗೂ 53ರಲ್ಲಿ ಎಷ್ಟು ಅರ್ಜಿ ಬಂದಿವೆ ಎಂದು ಮಾಹಿತಿ ಕೇಳಿದ್ರೆ ನೀಡುತ್ತಿಲ್ಲ. ವಿಧಾನ ಸಭಾ ಅಧಿವೇಶನದಲ್ಲಿ ಪ್ರಶ್ನೆ ಹಾಕಿ ಮಾಹಿತಿ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಿ ಮತ್ತು ಡಿ ಲ್ಯಾಂಡ್ ಜಾಗದಲ್ಲಿ 5 ಏಕರೆವರೆಗೆ ಒತ್ತುವರಿಯಾಗಿದ್ದರೆ ಹಕ್ಕುಪತ್ರವನ್ನು ಕೊಡಬಹುದು ಎಂದು ಸರ್ಕಾರವೇ ಕಾಯ್ದೆ ರೂಪಿಸಿದ್ದು, ಇಂತಹ ಜಾಗದಲ್ಲಿ 94 ಸಿ ಅಡಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ 3 ಸೆಂಟ್ ಜಾಗಕ್ಕೆ ಹಕ್ಕುಪತ್ರ ನೀಡುತ್ತಿಲ್ಲ. ಇಂತಹ ಅಧಿಕಾರಿಯಿಂದ ಹೇಗೆ ಕೆಲಸ ಮಾಡಿಸೋದು?’ ಎಂದು ಸಚಿವರನ್ನು ಪ್ರಶ್ನಿಸಿದರು.
ಈ ಸಂದರ್ಭ ವೇದಿಕೆಯಲ್ಲಿದ್ದ ಜಿ.ಪಂ. ಸದಸ್ಯೆ ಚಂದ್ರಕಲಾ ಶಾಸಕರ ಮಾತಿಗೆ ಕೊಂಕುನುಡಿಯಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ರಂಜನ್, ‘ಕೇಳ್ಬೇಕಲ್ಲಾ.., ನೀವು ಬಹಳ ಬುದ್ಧಿವಂತರು ಅಂತ ಗೊತ್ತಿದೆ’ ಎಂದು ಸುಮ್ಮನಾಗಿಸಿದರು. ‘ಗೋಣಿಮರೂರು ಗ್ರಾಮದ 236 ಎಕರೆ ಅರಣ್ಯ ಪ್ರದೇಶದಲ್ಲಿ ಕೇವಲ 100 ಎಕರೆ ಜಾಗ ಮಾತ್ರ ನೋಟಿಫಿಕೇಷನ್ ಆಗಿದೆ. 136 ಎಕರೆ ಜಾಗದಲ್ಲಿ ಬಡವರು ಮನೆ ಕಟ್ಟಿಕೊಂಡು ಕುಳಿತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ವಾಸ್ತವ ವರದಿ ನೀಡಬೇಕಾದ ಕಂದಾಯ ಇಲಾಖಾ ತಹಶೀಲ್ದಾರ್, ಸಿಬ್ಬಂದಿಗಳು, ಎ.ಸಿ., ಡಿ.ಸಿ., ಸುಮ್ಮನೆ ಕುಳಿತಿದ್ದಾರೆ. ಒಂದು ರೀತಿಯಲ್ಲಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ‘ಈ ಬಗ್ಗೆ ಕೇಳಿದ್ರೆ ಕುಶಾಲನಗರ ರೆವಿನ್ಯೂ ಇನ್ಸ್‍ಪೆಕ್ಟರ್ ಕೆಲಸ ಮಾಡೋದಿಲ್ಲ ಅಂತಾರೆ, ಅವರಿಂದ ಕೆಲಸ ಮಾಡಿಸೋದು ತಹಶೀಲ್ದಾರ್ ಜವಾಬ್ದಾರಿ ಅಲ್ವಾ? 94 ಸಿ ಅಡಿಯಲ್ಲಿ 100ಕ್ಕೆ ಶೇ. 90 ರಷ್ಟು ಮಂದಿಯಿಂದ ಹಣ ಪಡೆದಿದ್ದಾರೆ. ತಹಶೀಲ್ದಾರ್ ನಮ್ಮ ಊರಿನವರೇ ಇಲ್ಲಿನವರಾಗಿ ಕೆಲಸ ಮಾಡುತ್ತಿಲ್ಲ. ಗ್ರೇಡ್-2 ತಹಶೀಲ್ದಾರ್ ಹಾಕಿಸಿ, ಇಲ್ಲಾಂದ್ರೆ ಇವರನ್ನು ಎಸಿಬಿಗೆ ಟ್ರ್ಯಾಪ್ ಮಾಡಿಸ್ತೀನಿ’ ಎಂದು ಎಚ್ಚರಿಸಿದರು.
‘ನಾವು ಹಕ್ಕುಪತ್ರ ನೀಡುವವರಿಂದ ಇದುವರೆಗೂ ಒಂದು ಕಪ್ ಕಾಫಿಯನ್ನೂ ಕುಡಿದಿಲ್ಲ. ಒಂದು ರೂಪಾಯಿ ಹಣವನ್ನೂ ಪಡೆದಿಲ್ಲ. ಬೇಕಿದ್ರೆ ನಿಮ್ ಕಾಂಗ್ರೆಸ್ ಅಥವಾ ಜನತಾದಳದವರತ್ರ ಕೇಳಿ. ನಾವು ಅಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ರೂ ತಹಶೀಲ್ದಾರ್ ಸ್ಪಂದಿಸುತ್ತಿಲ್ಲ. ಮಂತ್ರಿಯಾಗಿ ಕೆಲಸ ಮಾಡಿ ನನಗೂ ಗೊತ್ತಿದೆ. ಆದರೆ ಜನರಿಗೆ ತೊಂದರೆ ಕೊಡಬೇಡಿ. ಹಣವಂತರು ಕೊಟ್ರೆ ಪಡ್ಕೊಳ್ರೀ; ಪಾಪದ ಬಡವರಿಂದ ಕೀಳ್ಬೇಡ್ರೀ..’ ಎಂದಾಗ ನೂರಾರು ಫಲಾನುಭವಿಗಳು ಚಪ್ಪಾಳೆ ತಟ್ಟಿ ಶಾಸಕರ ಮಾತನ್ನು ಅನುಮೋದಿಸಿದರು.
‘ನಿನ್ನೆ ರಾತ್ರಿ ತಹಶೀಲ್ದಾರ್ ಫೋನ್ ಮಾಡಿ ನಿಮ್ಮ ಕೆಲಸ ಮಾಡ್ತೀವಿ ಸಾರ್, ಕಂಪ್ಲೈಂಟ್ ಮಾಡ್ಬೇಡಿ ಅಂತ ಮನವಿ ಮಾಡ್ತಾರೆ. ಇದೆಲ್ಲ ಇವರ ನಾಟಕ. ನೂರು ಸಾರಿ ಹೇಳಿದ್ರೂ ಕೆಲಸ ಮಾಡಲ್ಲ. ಇವರಿಂದ ನಾನು ದುಡ್ಡು ಕೇಳಿದ್ರೆ ಹೇಳ್‍ಬಿಡ್ಲಿ.. ಲಕ್ಷನೋ ಸಾವಿರನೋ ಕೇಳಿದ್ದೀನಿ ಅಂದ್ರೆ ನೇರವಾಗಿ ಹೇಳ್ಬಿಡ್ಲಿ.. ನಾನು ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗ್ಬಿಡ್ತೀನಿ. ಆದ್ರೆ ಈ ರೀತಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡೋದು ಬೇಡ. ಇವರಿಗೆ ಸಚಿವರು ಸೂಕ್ತ ನಿರ್ದೇಶನ ನೀಡಲಿ ಎಂದು ಆಗ್ರಹಿಸಿದರು.
ಹಕ್ಕುಪತ್ರ ವಿತರಣೆಗೆ ಯಾರಿಂದಲಾದರೂ ಹಣ ಪಡೆದಿದ್ದರೆ ನೇರವಾಗಿ ತನಗೆ ದೂರು ನೀಡಿ. ದೂರಿನಲ್ಲಿ ಸತ್ಯಾಂಶವಿದ್ದರೆ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಉಸ್ತುವಾರಿ ಸಚಿವ ಸೀತಾರಾಂ ಹೇಳಿದರು.
ಜಾನಕಿ ಕನ್ವೆನ್‍ಷನ್ ಹಾಲ್‍ನಲ್ಲಿ 500ಕ್ಕೂ ಅಧಿಕ ಮಂದಿ ಫಲಾನುಭವಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತುಂಬಿದ್ದರು. ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಸಚಿವ ಸೀತಾರಾಂ ಅವರು, ‘ರಾಜ್ಯ ಸರ್ಕಾರ ಕಳೆದ 50 ವರ್ಷಗಳ ಬಡವರ ಬೇಡಿಕೆಯನ್ನು ಈಡೇರಿಸಿ ನಿಮಗೆ ಇಂದು ಹಕ್ಕುಪತ್ರ ವಿತರಿಸುತ್ತಿದ್ದೇವೆ’ ಎಂದರು. ಈ ಸಂದರ್ಭ ಪ್ರೇಕ್ಷಕರ ಸಾಲಿನಲ್ಲಿದ್ದ ಯಾರೊಬ್ಬರೂ ಸಂತಸ ವ್ಯಕ್ತಪಡಿಸಿ ಚಪ್ಪಾಳೆ ಹೊಡೆಯಲಿಲ್ಲ. ಇದಕ್ಕೆ ಗರಂ ಆದಂತೆ ಕಂಡುಬಂದ ಸಚಿವರು, ‘ಚಪ್ಪಾಳೆ ಹೊಡೀರಪ್ಪಾ.., ಎರಡೂ ಕೈ ಸೇರಿಸಿ ಚಪ್ಪಾಳೆ ಹೊಡೀರಿ. ಸುಮ್ನೆ ಕೂತಿದ್ದೀರಲ್ಲ?’ ಎಂದು ಆಗ್ರಹಪೂರ್ವಕವಾಗಿ ಮನವಿ ಮಾಡಿದರು.
ಈ ಸಂದರ್ಭ ಪಕ್ಕದಲ್ಲೇ ಇದ್ದ ಶಾಸಕ ರಂಜನ್, ‘ಎಲ್ಲರೂ ಹಕ್ಕುಪತ್ರಕ್ಕಾಗಿ ಹಣ ನೀಡಿದ್ದಾರೆ. ಅದಕ್ಕೆ ಚಪ್ಪಾಳೆ ಹೊಡೆಯುತ್ತಿಲ್ಲ’ ಎಂದು ಕುಟುಕಿದರು. ಇದಕ್ಕೆ ಉತ್ತರಿಸಿದ ಸಚಿವರು ‘ನೀವೂ ರಾಜ್ಯದಲ್ಲಿ ಅಧಿಕಾರದಲ್ಲಿದ್ರಿ, ಅದಕ್ಕೂ ಮುಂಚೆ ನಾವೂ ಇದ್ವಿ, ಇಷ್ಟು ವರ್ಷ ಹಕ್ಕುಪತ್ರ ಕೊಡೋಕೆ ಆಗಿರಲಿಲ್ಲ. ಆದ್ರೆ ಇವಾಗ ನಾವು ಕೊಡ್ತಿದ್ದೀವಿ. ಹಣ ಪಡ್ಕೊಂಡಿದ್ರೇ ಅದನ್ನೂ ಕೇಳ್ತೀವಿ. ಹಣ ಪಡೆದಿದ್ರೆ ಕ್ರಮ ಕೈಗೊಳ್ತೇವೆ. ಆದ್ರೆ 50 ವರ್ಷದ ನಂತರ ಹಕ್ಕು ಪತ್ರ ಕೊಡ್ತಿರೋದು ನಾವು ಅನ್ನೋದನ್ನು ಮರೀಬೇಡಿ’ ಎಂದಾಗ ಫಲಾನುಭವಿಗಳು ಚಪ್ಪಾಳೆ ಹೊಡೆದರು. ‘ಕಾಗೋಡು ತಿಮ್ಮಪ್ಪ ಅವರ ಆಸಕ್ತಿಯ ಮೇರೆ ರಾಜ್ಯಾದ್ಯಂತ ಬಡವರಿಗೆ ಅನುಕೂಲವಾಗಿದೆ’ ಎಂದ ಸಚಿವರ ಮಾತಿಗೂ ಮತ್ತೊಮ್ಮೆ ಚಪ್ಪಾಳೆ ಮೊಳಗಿದವು.