ಶನಿವಾರಸಂತೆ, ಡಿ. 19: ಅಪಘಾತಪಡಿಸಿ ಬೈಕ್‍ನಲ್ಲಿದ್ದ ತಂದೆ-ಮಗಳಿಗೆ ಗಾಯಪಡಿಸಿ ಪರಾರಿಯಾಗಿದ್ದ ಕಾರು 17 ದಿನಗಳ ನಂತರ ಪತ್ತೆಯಾಗಿ, ಆರೋಪಿ ಚಾಲಕನನ್ನು ವಶಪಡಿಸಿಕೊಳ್ಳಲು ಶನಿವಾರಸಂತೆ ಪೊಲೀಸರು ಸಫಲರಾಗಿದ್ದಾರೆ.

ಮಣಗಲಿ ಗ್ರಾಮದ ರಾಜಶೇಖರ್ ತಾ. 1 ರಂದು ಸಂಜೆ ತಮ್ಮ ಮಗಳು ಪ್ರಿಯಾಂಕಳನ್ನು ತನ್ನ ಮೋಟಾರ್ ಸೈಕಲ್ (ಕೆಎ 12 ಹೆಚ್ 2124)ನಲ್ಲಿ ಕೂರಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಯಸಳೂರು ಪೇಟೆಯ ಅಲ್ಮಾಸ್ ಪಾಷ ಎಂಬಾತ ತಮ್ಮ ಸ್ನೇಹಿತ ಕೆಂಚಮ್ಮನ ಹೊಸಕೋಟೆಯ ಮೂರ್ತಿ ಎಂಬವರಿಗೆ ಸೇರಿದ ಮಾರುತಿ ಓಮ್ನಿ ಕಾರು (ಕೆಎ 13 ಎಂ 3323)ನ್ನು ಪಡೆದು ಹಾಸನಕ್ಕೆ ತೆರಳಿ ಸಂಜೆ ವಾಪಾಸು ಬರುತ್ತಿರುವಾಗ ಬೆಳ್ಳಾರಳ್ಳಿ ಗ್ರಾಮದ ತಿರುವು ರಸ್ತೆಯಲ್ಲಿ ರಾಜಶೇಖರ್ ಓಡಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿ ಕಾರನ್ನು ನಿಲ್ಲಿಸದೆ ಪರಾರಿ ಯಾಗಿದ್ದರು. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಅಪಘಾತಪಡಿಸಿ ಪರಾರಿಯಾದ ಕಾರು, ಚಾಲಕ ಪತ್ತೆಯಾಗಿರಲಿಲ್ಲ. ಪೊಲೀಸ್ ಠಾಣೆಯ ಕಂಪ್ಯೂಟರ್ ನಿರ್ವಾಹಕ ಶಫೀರ್ ಅವರ ಪ್ರಯತ್ನದಿಂದ ಯಸಳೂರು ಪೇಟೆಯಲ್ಲಿ ಅಪಘಾತಪಡಿಸಿದ ಕಾರನ್ನು ವಶಪಡಿಸಿಕೊಂಡು ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ, ಗ್ರಾಮಸ್ಥರು ಹೊಡೆಯುತ್ತಾರೆ ಎಂಬ ಭಯದಿಂದ ಹೆದರಿ ಕಾರನ್ನು ನಿಲ್ಲಿಸದೆ ಯಸಳೂರು ಪೇಟೆಗೆ ತೆಗೆದುಕೊಂಡು ಹೋದೆ ಎಂಬದಾಗಿ ಒಪ್ಪಿ ಕೊಂಡಿರುತ್ತಾನೆ. ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.