ಮಡಿಕೇರಿ, ಡಿ. 19 : ಮುಂದಿನ ಹತ್ತು ದಿನಗಳ ಒಳಗೆ ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ಗಾಂಧಿ ಮಂಟಪದ ಎದುರು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲಾಗುವದೆಂದು ಜಾತ್ಯತೀತ ಜನತಾದಳದ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭಾ ವ್ಯಾಪ್ತಿಯ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಮಾರು ರೂ. 9 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಗುಂಡಿ ಮುಚ್ಚುವ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದರು. ಒಂದೆರಡು ವಾರ್ಡ್‍ಗಳಲ್ಲಿ ಮಾತ್ರ ಗುಂಡಿ ಮುಚ್ಚಲಾಗಿದ್ದು, ಉಳಿದ ಎಲ್ಲಾ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಹಾಗೇ ಉಳಿದಿವೆ. ಯುಜಿಡಿ ಯೋಜನೆಯಡಿ, ಚೇಂಬರ್‍ನ್ನು ಮಾತ್ರ ಅಳವಡಿಸಲಾಗುತ್ತಿದ್ದು, ಪೈಪ್ ಅಳವಡಿಕೆಗೆ ಮತ್ತೆ ರಸ್ತೆಯನ್ನು ಅಗೆಯಲೇಬೇಕಾಗಿದೆ. ಈ ರೀತಿಯ ಕಾಮಗಾರಿಯಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆಯೆಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಹತ್ತು ದಿನಗಳಲ್ಲಿ ವೈಜ್ಞಾನಿಕ ರೂಪದಲ್ಲಿ ರಸ್ತೆಗಳ ಗುಂಡಿ ಮುಚ್ಚದಿದ್ದಲ್ಲಿ ಪಕ್ಷದ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು. ಯುಜಿಡಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರು ವದರಿಂದ ಮತ್ತು ಮಡಿಕೆÉೀರಿ ನಗರಕ್ಕೆ ಇದು ಯೋಗ್ಯವಲ್ಲದ ಕಾರಣ ಕಾನೂನಿನ ಮೂಲಕ ಈ ಯೋಜನೆ ವಿರುದ್ಧ ಹೋರಾಟ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುವದೆಂದರು.

ಯುಜಿಡಿ ಯೋಜನೆಯ ಸುಮಾರು 49 ಕೋಟಿ ರೂ.ಗಳು ಪೋಲಾಗಿದ್ದು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕಮಿಷನ್ ಆಸೆಗಾಗಿ ಇದರಲ್ಲಿ ಶಾಮೀಲಾಗಿದ್ದಾ ರೆಂದು ಗಣೇಶ್ ಗಂಭೀರ ಆರೋಪ ಮಾಡಿದರು.

ನಗರೋತ್ಥಾನದ 3ನೇ ಹಂತದ ಕಾಮಗಾರಿಗೆ 35 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಕ್ರಿಯಾಯೋಜನೆ ತಯಾರಿಸಲಾಗಿದೆ. ಪ್ರತಿ ವಾರ್ಡ್‍ನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯ ಬೇಕಾಗಿದ್ದು, ಕಾಮಗಾರಿಯನ್ನು ಶೀಘ್ರ ನಡೆಸಬೇಕೆಂದು ಆಗ್ರಹಿಸಿದರು. ಗಾಂಧಿ ಮೈದಾನದಲ್ಲಿ ವಸ್ತು ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅಡಚಣೆÉಯಾಗುತ್ತಿದೆ. ತಕ್ಷಣ ಇದರ ಅನುಮತಿಯನ್ನು ರದ್ದುಪಡಿಸಬೇಕೆಂದ ಅವರು, ನಗರಸಭೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳು ಯಾವದು ಕೂಡ ಅನುಷ್ಟಾನಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಲೀಲಾ ಶೇಷಮ್ಮ, ಮಾಜಿ ಸದಸ್ಯರಾದ ಅಶ್ರಫ್, ಪ್ರಮುಖರಾದ ಸುಖೇಶ್ ಚಂಗಪ್ಪ ಹಾಗೂ ಇಬ್ರಾಹಿಂ, ಹಿಂದುಳಿದ ವರ್ಗಗಳ ಅಧ್ಯಕ್ಷ ಹೆಚ್.ಸಿ. ಸುನಿಲ್ ಉಪಸ್ಥಿತರಿದ್ದರು.