ಮಡಿಕೇರಿ, ಡಿ. 19: ಮಡಿಕೇರಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿರುವ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಕೃಷಿ ತಂತ್ರಜ್ಞಾನ ಸಪ್ತಾಹದ ಉದ್ಘಾಟನೆ ನೆರವೇರಿತು.

ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಧ ವಿಷಯಗಳ ಬಗೆಗಿನ ಐದು ದಿನಗಳ ಕಾರ್ಯಕ್ರಮವನ್ನು ನಬಾರ್ಡ್‍ನ ಜಿಲ್ಲಾ ಪ್ರಬಂಧಕ ಎಂ.ಸಿ.ನಾಣಯ್ಯ ಉದ್ಘಾಟಿಸಿದರು. ಕೊಡಗು ಮೂಲತಃ ಒಂದು ಸಂಪದ್ಭರಿತ ಜಿಲ್ಲೆ, ಇಲ್ಲಿಯ ನೈಸರ್ಗಿಕ ಸಂಪತ್ತನ್ನು ಸದುಪಯೋಗ ಪಡಿಸಿಕೊಳ್ಳಲು ವಿವಿಧ ಕೃಷಿ, ತೋಟಗಾರಿಕೆ ಮತ್ತು ಇತರೆ ಸಂಬಂದಿತ ಕಾರ್ಯಗಳನ್ನು ಕೈಗೊಳ್ಳುವಂತೆ ರೈತರಿಗೆ ಮನವಿ ಮಾಡಿದರು. ಯಾವದೇ ಕೃಷಿ ಚಟುವಟಿಕೆ ಸಾಧ್ಯವಿಲ್ಲ ಎನ್ನುವ ಮನಸ್ಥಿತಿಯಿಂದ ಮೊದಲು ಹೊರ ಬಂದು ಸಾಧಿಸಿ ತೋರುವ ಛಲವನ್ನು ಮೈಗೂಡಿಸಿಕೊಳ್ಳಬೇಕು, ಹಣಕಾಸಿನ ನೆರವಿಗೆ ಬ್ಯಾಂಕ್‍ಗಳ ಹಲವಾರು ಯೋಜನೆಗಳು ಲಭ್ಯವಿವೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ, ಗೋಣಿಕೊಪ್ಪಲು ಕೆ.ವಿ.ಕೆ.ಯ ಮುಖ್ಯಸ್ಥ ಡಾ. ಸಾಜು ಜಾರ್ಜ್ ತಂತ್ರಜ್ಞಾನ ವರ್ಗಾವಣೆಗೆ ಕೆ.ವಿ.ಕೆ, ಕೃಷಿ ವಿಶ್ವವಿದ್ಯಾಲಯ, ಮತ್ತು ಇತರ ಸಂಸ್ಥೆಗಳು ನಡೆಸುತ್ತಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಮಡಿಕೇರಿಯ ಸಹಾಯಕ ಕೃಷಿ ನಿರ್ದೇಶಕರಾದ ಡಾ.ಮಂಜುನಾಥ್ ರವರು ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಮಾತನಾಡಿ, ಕೃಷಿಯಲ್ಲಿ ತೊಡಗಿಕೊಳ್ಳಬೇಕಾದ ಅವಶ್ಯಕತೆ ಮತ್ತು ಲಭ್ಯವಿರುವ ಅವಕಾಶಗಳ ಬಗ್ಗೆ ವಿವರಿಸಿ, ಮಕ್ಕಳಿಗೆ ಕೃಷಿಯ ಪರಿಚಯ ಮಾಡಿಸಿ ಎಂದು ಹೇಳಿದರು. ಕೊಡಗಿನಲ್ಲಿ ವಿಸ್ತರಣಾ ಶಿಕ್ಷಣ ಘಟಕ ಮತ್ತು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳು ನಡೆಸುತ್ತಿರುವ ವಿವಿಧ ಚಟುವಟಿಕೆಗಳ ಮಾಹಿತಿ ನೀಡಿದ ಅವರು, ಕೃಷಿ ಸಂಬಂದಿತ ಯಾವದೇ ಮಾಹಿತಿ ತಂತ್ರಜ್ಞಾನವನ್ನು ಒದಗಿಸಲು ವಿಶ್ವವಿದ್ಯಾಲಯದ ಹಾಗೂ ಜಿಲ್ಲೆಯ ವಿವಿಧ ಸಂಶೋಧನಾ ಕೇಂದ್ರಗಳಲ್ಲಿ ವಿಫುಲ ಅವಕಾಶಗಳಿದ್ದು, ಅದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರಡ್ಡಿ ಸ್ವಾಗತಿಸಿ, ತಾ. 19 ರಿಂದ 23ರ ವರೆಗೆ ಕಾರ್ಯಕ್ರಮ ನಡೆಸಲಾಗುತ್ತದೆ. ತಾ. 20 ರಂದು ಸಂರಕ್ಷಿತ ತರಕಾರಿ ಬೆಳೆ ಬಗ್ಗೆ, ತಾ. 21 ರಂದು ಜೇನು ಸಾಕಾಣಿಕೆ ತಂತ್ರಜ್ಞಾನದ ಬಗ್ಗೆ, ತಾ. 22 ರಂದು ಹಣ್ಣು ಮತ್ತು ತರಕಾರಿಗಳ ಮೌಲ್ಯವರ್ಧನೆ ಹಾಗೂ ತಾ. 23ರಂದು ಒಳನಾಡು ಮೀನುಗಾರಿಕೆ ತಾಂತ್ರಿಕತೆಯ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ತಿಳಿಸಿದರು.

ಕ್ಷೇತ್ರ ಅಧೀಕ್ಷಕ ಡಾ. ಸತೀಶ್.ಎನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಚೇರಂಬಾಣೆ, ಭಾಗಮಂಡಲ ಪ್ರದೇಶದ ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೃಷಿ ಇಲಾಖೆಯ ಅಧಿಕಾರಿಗಳಾದ, ಗಿರೀಶ್ ಮತ್ತು ವರದರಾಜು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಅರಣ್ಯ ಮಹಾವಿದ್ಯಾಲಯದ ಯುವವಿಜ್ಞಾನಿ ಡಾ.ಕಾವೇರಿ ದೇವಯ್ಯ ಹಾಗೂ ವಿಸ್ತರಣಾ ಶಿಕ್ಷಣ ಘಟಕದ ಅರ್ಚನಾ ಮಾಹಿತಿ ನೀಡಿದರು.