ಶ್ರೀಮಂಗಲ, ಡಿ. 19: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ 49ನೇ ದಿನದ ಪ್ರತಿಭಟನಾ ಸತ್ಯಾಗ್ರಹಕ್ಕೆ ಬಾಡಗರಕೇರಿ ಹಾಗೂ ಪೊರಾಡು ಗ್ರಾಮಸ್ಥರು ಸುಮಾರು 30 ಕಿ.ಮೀ ದೂರದಿಂದ ಸುಮಾರು 70ಕ್ಕೂ ಅಧಿಕ ಬೈಕ್‍ನಲ್ಲಿ ಪೊನ್ನಂಪೇಟೆಗೆ ಬೈಕ್ ಜಾಥಾದ ಮೂಲಕ ಆಗಮಿಸಿ ಬೆಂಬಲ ನೀಡಿದರು. ಇದಲ್ಲದೇ ಸಿ.ಪಿ.ಐ (ಎಂ) ಪಕ್ಷ, ತಿತಿಮತಿ ಗ್ರಾ.ಪಂ., ವೀರಾಜಪೇಟೆ ತಾಲೂಕು ವೀರಶೈವ ಸಮಾಜ, ವೀರಾಜಪೇಟೆ ತಾಲೂಕು ಸವಿತಾ ಸಮಾಜ, ತಾಲೂಕು ಶರಣ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.
ಈ ಸಂದರ್ಭ ಮಾತನಾಡಿದ ಸಿ.ಪಿ.ಐ (ಎಂ) ಪಕ್ಷದ ಮುಖಂಡ ಡಾ. ದುರ್ಗಾ ಪ್ರಸಾದ್ ಅವರು, ಕಳೆದ 17 ವರ್ಷದಿಂದ ತಾಲೂಕು ಬೇಡಿಕೆಯನ್ನು ಸರ್ಕಾರದ ಮುಂದೆ ಮಂಡಿಸುತ್ತಾ ಬಂದಿದ್ದೇವೆ. 2008ರಲ್ಲಿ ಎ.ಸಿ.ಯಾಗಿದ್ದ ಅಕ್ರಂ ಪಾಷ ಅವರು 4 ಸದಸ್ಯರ ತಾಲೂಕು ಪುನರ್ ರಚನಾ ಅಧ್ಯಯನ ಸಮಿತಿ ರಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ ಕೊಡಗಿನಲ್ಲಿ ಪೊನ್ನಂಪೇಟೆ, ಕುಶಾಲನಗರ ಮತ್ತು ನಾಪೋಕ್ಲು ತಾಲೂಕು ರಚನೆಯ ಬೇಡಿಕೆ ಸಮಂಜಸವಾಗಿದೆ ಎಂದು ವರದಿ ಮಂಡಿಸಿದ್ದರು. ಆದರೆ ಸರ್ಕಾರವೇ ಅಧ್ಯಯನ ವರದಿ ಮಾಡಿದ್ದು ಅದನ್ನು ಅನುಷ್ಠಾನ ಮಾಡುವಲ್ಲಿ ಹಿಂದೇಟು ಹಾಕುತ್ತಿರು ವದು ಸರಿಯಲ್ಲ. ತಾಲೂಕು ರಚನೆಯ ಅಗತ್ಯತೆ ಬಗ್ಗೆ ಜನರಿಗೆ ಅರ್ಥವಾಗಿದೆ. ಆದರೆ ಅದನ್ನು ಮಾಡಬೇಕಾದವರಿಗೆ ಮನವರಿಕೆ ಯಾಗಿಲ್ಲ. ಆದ್ದರಿಂದ ಹೋರಾಟ ಮಾಡದೆ ಬೇರೆ ದಾರಿಯಿಲ್ಲ. ತಾಲೂಕು ರಚನೆಯಾಗುವವರೆಗೆ ತಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲ ನೀಡುವದಾಗಿ ಭರವಸೆ ನೀಡಿದರು.
ರಂಗಭೂಮಿ ಪ್ರತಿಷ್ಠಾನದ ಪ್ರಮುಖ ಅಡ್ಡಂಡ ಕಾರ್ಯಪ್ಪ ಮಾತನಾಡಿ, 2008ರಲ್ಲಿ ಸರ್ಕಾರಕ್ಕೆ ತಾಲೂಕು ಪುನರ್ ರಚನೆ ಅಧ್ಯಯನ ಸಮಿತಿ ತಾಲೂಕು ರಚನೆಗೆ ಸಕಾರಾತ್ಮಕವಾಗಿ ವರದಿ ಸಲ್ಲಿಸಿದೆ. ಆದರೆ 2008ರಿಂದ ಶಾಸಕರು, ಸಚಿವರು ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ ಎಂದರು. ಕೊಡಗಿನಲ್ಲಿ 3 ತಾಲೂಕು ರಚನೆಯಾಗಬೇಕು. ಇದ್ದ ತಾಲೂಕು ಕೊಡಿ ಎಂದು ಕೇಳುತ್ತಿದ್ದೇವೆ ಹೊರತು ಹೊಸ ತಾಲೂಕು ರಚನೆಯ ಬೇಡಿಕೆ ನಾವು ಮುಂದಿಟ್ಟಿಲ್ಲ. ಜನವರಿ 9ಕ್ಕೆ ಮಡಿಕೇರಿಗೆ ಸಿ.ಎಂ. ಸಿದ್ದರಾಮಯ್ಯ ಬರುತ್ತಿದ್ದು, ಅವರಲ್ಲಿ ತಾಲೂಕು ಬೇಡಿಕೆಯ ಬಗ್ಗೆ ಪ್ರಬಲವಾದ ಮನವಿ ಸಲ್ಲಿಸಬೇಕಾಗಿದೆ ಎಂದರು.
ಜನವರಿ ಒಂದರಂದು 50 ಹೊಸ ತಾಲೂಕು ರಚನೆಯಾಗುತ್ತಿದ್ದು ಈ ಪಟ್ಟಿಯಲ್ಲಿ ಕೊಡಗಿನ ಕನಿಷ್ಟ 2 ತಾಲೂಕು ಇರಬೇಕು ಎನ್ನುವದು ನಮ್ಮ ಅಭಿಲಾಷೆಯಾಗಿದೆ. ಒಂದು ವೇಳೆ ಇಲ್ಲದಿದ್ದರೆ ಜನವರಿ ಒಂದನ್ನು ಕರಾಳ ದಿನವಾಗಿ ಆಚರಣೆ ಮಾಡುವ ಮೂಲಕ ನಮ್ಮ ಪ್ರತಿಭಟನೆ, ಚಳುವಳಿ ಮತ್ತಷ್ಟು ಕಠಿಣಗೊಳಿಸಬೇಕಾಗಿದೆ ಎಂದರು.
ಈ ಸಂದರ್ಭ ಬಿರುನಾಣಿಯ ಮರೆನಾಡು ಕೊಡವ ಸಮಾಜದ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ, ಸಿ.ಪಿ.ಐ. (ಎಂ) ಪಕ್ಷದ ಮುಖಂಡ Àರಾದ ಎ.ಸಿ. ಸಾಬು, ಮಹದೇವ, ರಮೇಶ್, ಕುಟ್ಟಪ್ಪ, ಯುಕೊ ಸಂಚಾಲಕ ಮಂಜು ಚಿಣ್ಣಪ್ಪ, ರಾಬಿನ್ ಸುಬ್ಬಯ್ಯ, ಸವಿತಾ ಸಮಾಜದ ಅಧ್ಯಕ್ಷ ವಿ.ಬಿ. ಕಿರಣ್, ಉಪಾಧ್ಯಕ್ಷ ಎಂ.ಎಸ್ ಸತೀಶ್, ಕಾರ್ಯದರ್ಶಿ ಎಂ.ಎಸ್. ಪ್ರವೀಣ್, ವೀರಶೈವ ಸಮಾಜದ ಅಧ್ಯಕ್ಷ ಕೆ. ಎನ್. ಸಂದೀಪ್, ಕಾರ್ಯದರ್ಶಿ ಕೆ.ಎನ್. ವಿಶ್ವನಾಥ್, ಉಪಾಧ್ಯಕ್ಷ ಎಸ್.ಜಿ. ಮರಿಸ್ವಾಮಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಸ್. ಸುರೇಶ್, ಉಪಾಧ್ಯಕ್ಷ ಎಸ್.ಬಿ. ಪರಶಿವ, ಕಾರ್ಯದರ್ಶಿ ಎಸ್.ಎನ್. ರಾಜೇಂದ್ರ ಪ್ರಸಾದ್, ಬಾಡಗರಕೇರಿ ಮಹಿಳಾ ಸಮಾಜದ ಕಾರ್ಯದರ್ಶಿ ಅಣ್ಣೀರ ಮಲ್ಲಿಗೆ ಪೂಣಚ್ಚ, ಗ್ರಾ.ಪಂ. ಸದಸ್ಯ ಕಾಯಪಂಡ ಸುನಿಲ್, ಬಾಡಗರಕೇರಿ ಊರು ಅಧ್ಯಕ್ಷ ಕಾಯಪಂಡ ರೋಹಿತ್, ಬಲ್ಯಮೀದೇರಿರ ಸುರೇಶ್, ಕಾಯಪಂಡ ಅಜಿತ್, ಮೋಹನ್, ಮಧು ಮೋಟಯ್ಯ, ಪೊರಾಡು ಊರು ಪಂಚಾಯ್ತಿ ಅಧ್ಯಕ್ಷ ಮೀದೇರಿರ ಮಂಜುನಾಥ್, ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್, ಮೃತ್ಯುಂಜಯ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನೀರ ಸುಬ್ರಮಣಿ, ಕಾರ್ಯದರ್ಶಿ ಅಮ್ಮತ್ತಿರ ಚಂದ್ರಶೇಖರ್, ಬಲ್ಯಮೀದೇರಿರ ಶರಣ್ ಚಂಗಪ್ಪ, ಮೀದೇರಿರ ಜೀವನ್, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಬಿರುನಾಣಿಯ ಉಪಾಧ್ಯಕ್ಷೆ ಬಲ್ಯಮೀದೇರಿರ ಚೋಂದಮ್ಮ, ತಿತಿಮತಿ ಗ್ರಾಮದ ಪರವಾಗಿ ವಿ.ಎಸ್. ಎಸ್.ಎನ್. ಅಧ್ಯಕ್ಷ ರಾಮಕೃಷ್ಣ, ಪಾಲೇಂಗಡ ಮನು ನಂಜಪ್ಪ, ವಿಲ್ಸನ್, ತಾ.ಪಂ. ಸದಸ್ಯೆ ಆಶಾ ಜೇಮ್ಸ್ ಮತ್ತಿತರರು ಹಾಜರಿದ್ದರು.