ಗೋಣಿಕೊಪ್ಪ ವರದಿ, ಡಿ. 19: ಪೊನ್ನಂಪೇಟೆ ತಾಲೂಕು ರಚನೆ ಮಾಡಬೇಕು ಹಾಗೂ ಕೇರಳಕ್ಕೆ ಕೊಡಗು ಮೂಲಕ ಸಂಪರ್ಕಿಸುವ ರೈಲ್ವೆ ಮಾರ್ಗವನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಿತಿಮತಿ ಗ್ರಾಮ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ತಿತಿಮತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೆಚ್. ಇ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಮುದಾಯ ಭವನದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಗ್ರಾಮಸ್ಥರು, ಪೊನ್ನಂಪೇಟೆ ತಾಲೂಕು ರಚನೆ ಗೊಂಡರೆ ಹಲವಾರು ಆಡಳಿತಾತ್ಮಕ ಸಮಸ್ಯೆಗಳು ಬಗೆಹರಿಯುತ್ತದೆ. ಜೊತೆಗೆ ಜನರಿಗೂ ಉಪಯೋಗ ವಾಗುತ್ತದೆ ಎಂದು ಗಮನ ಸೆಳೆದರು.

ಸ್ಥಳೀಯ ಚೆಪ್ಪುಡೀರ ಶರಿ ಸುಬ್ಬಯ್ಯ ಮಾತನಾಡಿ, ಕೇರಳ, ಕೊಡಗು ರೈಲ್ವೆ ಮಾರ್ಗ ನಿರ್ಮಾಣದಿಂದ ಕೊಡಗಿಗೆ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ಇದರಿಂದ ಇಲ್ಲಿನ ನಿವಾಸಿಗಳಿಗೆ ಯಾವದೇ ಪ್ರಯೋಜನವಾಗುವದಿಲ್ಲ. ಸಾವಿರಾರು ಮರಗಳು ಹನನವಾಗಿ ಕೊಡಗಿನ ಕೃಷಿ ಮೇಲೆ ನೇರ ಪರಿಣಾಮ ಬೀರುತ್ತದೆ. ರೈತರು ತಮ್ಮ ಜಾಗಗಳನ್ನು ಕಳೆದುಕೊಳ್ಳುತ್ತಾರೆ. ಈ ಬಗ್ಗೆ ನಾಗರಿಕರು ಜಾಗೃತಗೊಂಡು ರೈಲ್ವೆ ಮಾರ್ಗಕ್ಕೆ ಪ್ರಥಮ ಹಂತದಲ್ಲೇ ವಿರೋಧ ವ್ಯಕ್ತಪಡಿಸಬೇಕೆಂದರು. ಪೊನ್ನಂಪೇಟೆ ತಾಲೂಕು ರಚನೆ ಮಾಡುವದು ಹಾಗೂ ಉದ್ದೇಶಿತ ರೈಲ್ವೆ ಮಾರ್ಗವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ತಿತಿಮತಿ ಭಾಗದಲ್ಲಿ ಅತಿ ಹೆಚ್ಚು ಕಾಡಾನೆ ಸಮಸ್ಯೆ ಇದ್ದು ಗ್ರಾಮ ಸಭೆಗಳಿಗೆ ವನ್ಯಜೀವಿ ಅಧಿಕಾರಿಗಳು ನಿರಂತರ ಗೈರಾಗುವ ಮೂಲಕ ಜನರಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ವ್ಯಕ್ತವಾಯಿತು.

ಸ್ಥಳೀಯ ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಮಾರುಕಟ್ಟೆ ನಿರ್ಮಾಣ ಮಾಡಲು ಪಂಚಾಯ್ತಿ ಮುಂದಾಗ ಬೇಕು. ಪಂಚಾಯಿತಿ ವತಿಯಿಂದ ವರ್ಷಕ್ಕೊಮ್ಮೆ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದರು.

ಅಂಗನವಾಡಿ ಬಳಿ ಮಂಗಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರಿಂದ ಮಕ್ಕಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ದೂರಿದರು.

ಎಕ್ಸ್‍ಪ್ರೆಸ್ ಲೈನ್ ಅಳವಡಿಕೆ ಮುಂದಿನ ತಿಂಗಳಿನಿಂದ ನಡೆಯುತ್ತದೆ ಎಂದು ಸೆಸ್ಕಾಂ ಜೂನಿಯರ್ ಇಂಜಿನಿಯರ್ ಕೃಷ್ಣಕುಮಾರ್ ಮಾಹಿತಿ ನೀಡಿದರು. ಈಗಾಗಲೇ ಟೆಂಡರ್ ಕಾರ್ಯ ನಡೆದಿದ್ದು ಮುಂದಿನ ತಿಂಗಳಿನಿಂದ ಎಕ್ಸ್‍ಪ್ರೆಸ್ ಲೈನ್ ಕಾಮಗಾರಿ ಆರಂಭಗೊಳ್ಳಲಿದೆ. ವಾರದೊಳಗೆ ಗಂಗಾ ಕಲ್ಯಾಣ ಯೋಜನೆ ಕಾಮಗಾರಿಗೆ ಚಾಲನೆ ದೊರಕಲಿದೆ ಎಂದರು. ಹಿಮಾಲಯ ಪರ್ವತಾರೋಹಣ ಮಾಡಿದ ತಿತಿಮತಿ ಗ್ರಾಮದ ಸಂಚೀತ್, ಸನತ್, ಪ್ರೀತಂ, ಹಿರಿಯ ರಾಜಕಾರಣಿ ಶರಣ್‍ಪಿಳೈ, ಲೈನ್ ಮೆನ್ ನಾಯಕ್ ಅವರುಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ನೋಡೆಲ್ ಅಧಿಕಾರಿ ಚಂದ್ರಶೇಖರ್, ತಾ.ಪಂ ಸದಸ್ಯೆ ಆಶಾ ಜೇಮ್ಸ್, ಗ್ರಾ.ಪಂ ಸದಸ್ಯರುಗಳಾದ ಚುಬ್ರು, ಅನೂಪ್, ಶಾಂತಮ್ಮ, ಸಿದ್ದರಾಜ್, ಪೊನ್ನು, ರಾಣಿ ಸುಬ್ಬಯ್ಯ, ಶ್ರೀನಿವಾಸ್, ವಿಜಯ, ಮುತ್ತ, ರಜನಿ ಪಾಲ್ಗೊಂಡಿದ್ದರು.