ಮಡಿಕೇರಿ, ಡಿ. 19: ವಾಟೆಕಾಡಿನಲ್ಲಿ ಪರಿಶಿಷ್ಟ ಜಾತಿ-ಪಂಗಡ ಮತ್ತು ಹಿಂದುಳಿದ ವರ್ಗಕ್ಕಾಗಿ ತಲಾ 2 ಏಕರೆಯಂತೆ ಒಟ್ಟು 4 ಏಕರೆ ಪ್ರದೇಶದಲ್ಲಿ ಸ್ಮಶಾನಕ್ಕಾಗಿ ಜಿಲ್ಲಾಡಳಿತ ಅನುಕೂಲ ಕಲ್ಪಿಸಿದ್ದು, ಚಿತಾಗಾರದ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದೆ. ಶೀಘ್ರದಲ್ಲೆ ಉದ್ಘಾಟನೆಗೊಳ್ಳಲಿರುವ ಚಿತಾಗಾರವನ್ನು ಸ್ಥಳೀಯ ನಿವಾಸಿಗಳು ಯಾವದೇ ಗೊಂದಲಕ್ಕೆ ಕಿವಿಗೊಡದೆ ಸದುಪಯೋಗಪಡಿಸಿಕೊಳ್ಳಬೇಕೆಂದು ಪಾಲೇಮಾಡು ನಾಗರಿಕ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಬಿ.ಎಲ್. ಜನಾರ್ಧನ, ಒಣ ಪ್ರತಿಷ್ಠೆಗಾಗಿ ಕೆಲವರು ಸ್ಮಶಾನದ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದ್ದು, ಸ್ಥಳೀಯರನ್ನು ನೆಮ್ಮದಿಯಾಗಿ ಜೀವನ ನಡೆಸಲು ಅವಕಾಶ ನೀಡುತ್ತಿಲ್ಲವೆಂದು ಆರೋಪಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಆದೇಶದಂತೆ ಚಿತಾಗಾರದ ಕಾಮಗಾರಿ ಆರಂಭಗೊಂಡಿದ್ದು, ಶೇ.80 ರಷ್ಟು ಪೂರ್ಣಗೊಂಡಿದೆ. ಎರಡು ವಾರದಲ್ಲಿ ಶವಾಗಾರ ಉದ್ಘಾಟನೆಗೊಳ್ಳಲಿದ್ದು, ಸ್ಥಳೀಯರು ಇದರ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ. ಕ್ರೀಡಾಂಗಣಕ್ಕಾಗಿ ಮೀಸಲಾಗಿರುವ ಪ್ರದೇಶದಲ್ಲೆ ಸ್ಮಶಾನಕ್ಕೆ ಜಾಗಬೇಕೆಂದು 40 ರಿಂದ 50 ಮಂದಿಯಷ್ಟೆ ಹಟ ಹಿಡಿದಿದ್ದು, ಇದು ಶಾಂತಿಭಂಗ ಮಾಡುವ ಯತ್ನವಾಗಿದೆ ಎಂದು ಜನಾರ್ಧನ ಆರೋಪಿಸಿದರು.
ಸುಮಾರು 4 ಏಕರೆ ಪ್ರದೇಶದಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಚಿತಾಗಾರ ನಿರ್ಮಾಣವಾಗುತ್ತಿದೆ. ಒಟ್ಟು 387 ಕುಟುಂಬಗಳು ಪಾಲೆÉೀಮಾಡು ಮತ್ತು ವಾಟೆಕಾಡಿನಲ್ಲಿ ನೆಲೆಸಿದ್ದು, ಆರಂಭದ ಹೋರಾಟದ ಸಂದರ್ಭ ಯಾವದೇ ರಾಜಕೀಯ ಪಕ್ಷಗಳು ಬೆಂಬಲ ನೀಡಿರಲಿಲ್ಲ. ಆದರೆ, ಇದೀಗ ಚುನಾವಣೆÉ ಸಮೀಪಿಸುತ್ತಿರುವದರಿಂದ ಎಸ್ಡಿಪಿಐ ಸೇರಿದಂತೆ ಕೆಲವು ಪಕ್ಷಗಳು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಇಲ್ಲಿಗೆ ಆಗಮಿಸುತ್ತಿವೆಯೆಂದು ಟೀಕಿಸಿದರು.
ಈ ಪ್ರದೇಶದಲ್ಲಿ ಸುಮಾರು 800 ಮತಗಳಿದ್ದು, ಯಾವದೇ ಕಾರಣಕ್ಕೂ ಮತಬ್ಯಾಂಕ್ ರಾಜಕಾರಣಕ್ಕಾಗಿ ಗೊಂದಲ ಸೃಷ್ಟಿಯಾಗುವದಕ್ಕೆ ಅವಕಾಶ ನೀಡುವದಿಲ್ಲವೆಂದು ಜನಾರ್ಧನ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಹೆಚ್.ಸಿ. ನಂದ ಉಪಸ್ಥಿತರಿದ್ದರು.