ಬ್ಯಾಂಕ್‍ಗಳನ್ನು ಮುಚ್ಚಲ್ಲ : ಆರ್‍ಬಿಐ ಸ್ಪಷ್ಟನೆ ನವದೆಹಲಿ-ಮುಂಬೈ, ಡಿ. 22: ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ) ನಿರ್ಧರಿಸಿವೆ ಎಂದು ಸಾಮಾಜಿಕ ವಲಯದಲ್ಲಿ ಹರಿದಾಡುತ್ತಿದ್ದ ವದಂತಿಗೆ ಆರ್ಬಿಐ ಸ್ಪಷ್ಟನೆ ನೀಡಿದ್ದು ಯಾವದೇ ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಷ್ಟದಲ್ಲಿರುವ ಕೆಲವು ಬ್ಯಾಂಕ್ ಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಮುಚ್ಚುವ ಯಾವದೇ ಪ್ರಶ್ನೆ ಇಲ್ಲ. ಬಂಡವಾಳ ಮರುಪೂರ್ಣ ಯೋಜನೆಯಡಿಯಲ್ಲಿ ಬ್ಯಾಂಕುಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದ್ದು, 2.11 ಲಕ್ಷ ಕೋಟಿ ರೂಪಾಯಿ ನೀಡಲಾಗಿದೆ ಎಂದು ಹಣಕಾಸು ಸೇವಾ ಇಲಾಖೆಯ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟರ್‍ನಲ್ಲಿ ತಿಳಿಸಿದ್ದಾರೆ. ಇನ್ನು ಸಾರ್ವಜನಿಕ ವಲಯದ ಬ್ಯಾಂಕ್‍ಗಳಾದ ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್‍ಗಳು ಸೇರಿದಂತೆ ಹಲವು ಬ್ಯಾಂಕುಗಳ ವಿರುದ್ಧ ಆರ್‍ಬಿಐ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗಿತ್ತು.

ಗುಜರಾತ್ ಮುಖ್ಯಮಂತ್ರಿಯಾಗಿ ರೂಪಾನಿ ಅಧಿಕಾರ

ಗುಜರಾತ್, ಡಿ. 22: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಅಧಿಕಾರ ಸ್ವೀಕರಿಸಲಿದ್ದಾರೆ. ಗಾಂಧಿನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಜಯ್ ರೂಪಾನಿ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ತಾ. 25 ರಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟಹಬ್ಬದ ದಿನ ರೂಪಾನಿ ಮುಖ್ಯಮಂತ್ರಿಯಾಗಿ ಹಾಗೂ ಉಪ ಮುಖ್ಯಮಂತ್ರಿಯಾಗಿ ನಿತಿನ್ ಬಾಯ್ ಪಟೇಲ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗುಜರಾತ್‍ನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಹಾಗೂ ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಗುಜರಾತ್‍ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ 99 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹುಮತ ಪಡೆದಿತ್ತು. ಸರಳ ಬಹುಮತಕ್ಕೆ 92 ಸ್ಥಾನಗಳು ಬೇಕಿತ್ತು. ಇನ್ನು ಓರ್ವ ಪಕ್ಷೇತರ ಶಾಸಕ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದು ಬಿಜೆಪಿಯ ಸಂಖ್ಯೆ 100ಕ್ಕೇರಿದೆ.

ಅನುದಾನ ಸಂಗ್ರಹಿಸಲು ಹೆದ್ದಾರಿ ಬಾಂಡ್

ನವದೆಹಲಿ, ಡಿ. 22: ದೇಶದ ಹೆದ್ದಾರಿಗಳನ್ನು ನಿರ್ಮಿಸಲು ಬೇಕಾದ ಅನುದಾನ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಾಂಡ್‍ಗಳನ್ನು ಪರಿಚಯಿಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೌಶಲ ತರಬೇತಿ ಪೂರ್ಣಗೊಳಿಸಿದ ಹೆದ್ದಾರಿ ನಿರ್ಮಾಣ ಕಾರ್ಮಿಕರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಬಡವರು ಚಿಟ್‍ಫಂಡ್‍ನಂತಹ ಸ್ಕೀಮ್‍ಗಳಲ್ಲಿ ಹಣ ಹೂಡುವ ಬದಲು ಈ ಬಾಂಡ್‍ಗಳನ್ನು ಕೊಂಡರೆ ಶೇ. 7.5 ರಷ್ಟು ಬಡ್ಡಿ ಸಿಗಲಿದೆ. ಖರೀದಿಸುವ ಬಾಂಡ್‍ಗಳಿಗೆ 10 ವರ್ಷಗಳ ಕಾಲ ಪ್ರತಿ ತಿಂಗಳು ಬಡ್ಡಿಯನ್ನು ಖಾತೆಗೆ ಜಮೆ ಮಾಡಲಾಗುತ್ತದೆ ಎಂದರು. ಬಡ ಕಾರ್ಮಿಕರು, ಕಾನ್ಸ್‍ಟೇಬಲ್‍ಗಳು, ಪತ್ರಕರ್ತರು, ಸಣ್ಣಪುಟ್ಟ ಕೆಲಸ ಮಾಡುವವರು ಈ ಬಾಂಡ್‍ಗಳನ್ನು ಖರೀದಿಸುವಂತೆ ಮನವೊಲಿಸುತ್ತೇವೆ. ರಕ್ಷಣಾ ಸೇವೆಯಲ್ಲಿ ಇರುವವರು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ (ಶೇ. 7.75) ನೀಡಲಿದ್ದೇವೆ.

ರಾಜಕೀಯ ಪ್ರಕರಣ ಹಿಂಪಡೆಯಲಿದೆ ಯುಪಿ

ಲಖನೌ, ಡಿ. 22: ಶಾಸಕರು ಹಾಗೂ ಇತರರ ವಿರುದ್ಧ ರಾಜಕೀಯ ಪ್ರೇರಿತವಾಗಿ ದಾಖಲಿಸಲಾದ ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಸಲುವಾಗಿ ಕಾನೂನು ರಚನೆ ಮಾಡಲು ಉತ್ತರಪ್ರದೇಶ ಸರ್ಕಾರ ಶುಕ್ರವಾರ ನಿರ್ಧಾರ ಕೈಗೊಂಡಿದೆ. ಉತ್ತರ ಪ್ರದೇಶ ಸಂಘಟಿತ ಅಪರಾಧ ನಿಯಂತ್ರಣ ಮಸೂದೆ 2017 ಮೇಲಿನ ವಿಧಾನಸಭೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕಾನೂನು ಜಾರಿಗೆ ಬಂದ ಬಳಿಕ 20 ಸಾವಿರ ರಾಜಕೀಯ ಪ್ರೇರಿತ ಪ್ರಕರಣಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಸಚಿವರು ಶಾಸಕರು ಹಾಗೂ ಇನ್ನಿತರರ ವಿರುದ್ಧ ರಾಜಕೀಯ ಪ್ರೇರಿತವಾಗಿ ದಾಖಲಾಗಿರುವ ಸುಮಾರು 20 ಸಾವಿರ ಪ್ರಕರಣಗಳನ್ನು ರದ್ದು ಪಡಿಸುವದೇ ಪ್ರಸ್ತಾವಿತ ಕಾಯ್ದೆಯ ಉದ್ದೇಶವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಅನ್ವಯವಾಗಲಿದೆ ಎಂದು ವಿವರಣೆ ನೀಡಿದ್ದಾರೆ.