ಪೊನ್ನಂಪೇಟೆ, ಡಿ. 22: ಸಾಯಿಶಂಕರ ಕಾಲೇಜಿನಲ್ಲಿ ಪದವಿಪೂರ್ವ, ಪದವಿ ಮತ್ತು ಬಿ.ಎಡ್ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.ಪೊನ್ನಂಪೇಟೆ ಪೊಲೀಸ್ ಠಾಣೆಯ ವೃತ ನಿರೀಕ್ಷ ಮಹೇಶ್ ಪಿ.ಎಸ್. ಉಪನ್ಯಾಸ ನೀಡಿದರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ವಿವಿಧ ಮಾಧಕ ಪದಾರ್ಥ ಗಳನ್ನು ಸೇವಿಸಿ ವಾಹನಗಳನ್ನು ಅತೀ ವೇಗದಲ್ಲಿ ಚಲಾಯಿಸುವದಲ್ಲದೆ, ತಮಗೆ ತಾವೇ ಅನಾಹುತಗಳನ್ನು ತಂದುಕೊಳ್ಳುತ್ತಿದ್ದಾರೆ. ಇದಲ್ಲದೆ ವಾಹನ ಚಲಾಯಿಸಲು ಬೇಕಾದ ಲೈಸನ್ಸನ್ನು ಹೊಂದಿರುವದಿಲ್ಲ. ಇಂತವರ ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವದು. ವಾಹನ ಚಲಾಯಿಸುವ ಎಲ್ಲರೂ ಆರ್.ಸಿ. ಪುಸ್ತಕ, ಲೈಸನ್ಸ್, ಇನ್ಸೂರೆನ್ಸ್‍ಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು ಎಂದು ತಿಳಿಸಿದರು. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಕಳ್ಳತ್ತನ ಪ್ರಕರಣ ಅತಿಯಾಗಿದ್ದು, ತಮ್ಮ ಮನೆಗಳಲ್ಲಿ ಅಮೂಲ್ಯವಾದ ಚಿನ್ನಾಭರಣ ಮತ್ತು ಹಣವನ್ನು ಇಟ್ಟುಕೊಳ್ಳದೆ ಅದನ್ನು ಬ್ಯಾಂಕ್ ಲಾಕರ್‍ನಲ್ಲಿ ಇಟ್ಟುಕೊಳ್ಳುವದು ಭದ್ರತೆಯ ದೃಷ್ಟಿಯಿಂದ ಉತ್ತಮ ಎಂಬ ಸಲಹೆಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಬೀರೇಗೌಡ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗದವರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.