ಮಡಿಕೇರಿ, ಡಿ. 22: ಹಣಕಾಸು ಇಲಾಖೆಯಿಂದ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಗ್ರಾಮ ಪಂಚಾಯಿತಿ ನೌಕರರ ವೇತನವನ್ನು ನೀಡುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ. 27 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘÀದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಹೋರಾಟಗಳ ಹಿನ್ನೆಲೆ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಯಲ್ಲಿನ ಅನುಮೋದನೆಗೊಂಡ ಹಾಗೂ ಅನುಮೋದನೆಗೊಳ್ಳದ ಸಿಬ್ಬಂದಿಗಳಿಗೆ ಸರ್ಕಾರದಿಂದಲೇ ವೇತನ ಪಾವತಿಗೆ ಆದೇಶವನ್ನು ಹೊರಡಿಸಿದೆ. ಇದಕ್ಕಾಗಿ ಹಣಕಾಸು ಇಲಾಖೆಯಿಂದ ರೂ. 570 ರಿಂದ 580 ಕೋಟಿ ಮಂಜೂರಾತಿಯನ್ನು ಪ್ರಸ್ತಾಪಿಸಿತ್ತು. ಆದರೆ, ಹಣ ಮಂಜೂರಾತಿಯಾಗದೆ ಇಂದಿಗೂ ಸರ್ಕಾರದ ಆದೇಶ ಪಾಲನೆಯಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರಮುಖ ಬೇಡಿಕೆಯೊಂದಿಗೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾ. 27 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘದ ಎಲ್ಲಾ ಸದಸ್ಯರು ಸಮಾವೇಶಗೊಂಡು ಪ್ರತಿಭಟನೆ ನಡೆಸಲಿದ್ದೇವೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು.

ಗ್ರಾ.ಪಂ. ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕಾದ ಜಿಲ್ಲಾ ಪಂಚಾಯಿತಿಯ ಸಿಇಒ ಹುದ್ದೆಯೇ ಇಲ್ಲಿ ಖಾಲಿಯಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಪ್ರಸ್ತುತ ಆಡಳಿತ ವ್ಯವಸ್ಥೆ ವೈಫಲ್ಯಗಳನ್ನು ಎದುರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ವ್ಯಾಪ್ತಿಯ ಬಹುತೇಕ ಪಂಚಾಯಿತಿಗಳಲ್ಲಿನ ಸಿಬ್ಬಂದಿಗಳಿಗೆ ಕಳೆದ ಐದಾರು ತಿಂಗಳಿನಿಂದ ಮಾಸಿಕ ವೇತನ ಪಾವತಿಯಾಗಿಲ್ಲ. ಸರ್ಕಾರದ ಆದೇಶದಂತೆ ಗ್ರಾ.ಪಂ.ಗಳ ಅನುದಾನದ ಶೇ. 40 ನ್ನು ಕಡ್ಡಾಯವಾಗಿ ಗ್ರಾ.ಪಂ. ನೌಕರರ ವೇತನಕ್ಕೆ ಮೀಸಲಿಡಬೇಕು. ಆದರೆ, ಬಹುತೇಕ ಪಂಚಾಯಿತಿಗಳಲ್ಲಿ ಈ ಹಣವನ್ನು ರಸ್ತೆ, ತಡೆಗೋಡೆ ಮೊದಲಾದ ಕಾಮಗಾರಿಗಳಿಗೆ ಬಳಕೆ ಮಾಡುತ್ತಿರುವದಾಗಿ ಆರೋಪಿಸಿದರು.

ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಜಿ. ವಿಠಲ್, ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಎಂ.ಕೆ. ಹರೀಶ್ ಹಾಗೂ ಮಡಿಕೇರಿ ಕಾರ್ಯದರ್ಶಿ ಬಿ.ಜೆ. ಲೀಲಾವತಿ ಉಪಸ್ಥಿತರಿದ್ದರು.