ಮಡಿಕೇರಿ, ಡಿ. 20: ದಶಕಗಳ ಹಿಂದೆ ದ್ವೀಪದಂತಿರುವ ಕಾವೇರಿ ಹೊಳೆ ನಡುವಿನ ದುಬಾರೆಯಲ್ಲಿ ಸಾಕಾನೆಗಳು ಜಲಕ್ರೀಡೆಯೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಪ್ರಸಕ್ತ ಇಲ್ಲಿ ರ್ಯಾಫ್ಟಿಂಗ್ ಮೂಲಕ ಪ್ರವಾಸಿಗರು ನಲಿವು ಕಂಡುಕೊಂಡರೆ, ಆ ಭಾಗದ ನೂರಾರು ಕುಟುಂಬಗಳು ಕಾವೇರಿ ಹೊಳೆ ನೀರಿನ ಒಡನಾಟದಿಂದ ಬದುಕು ಕಟ್ಟಿಕೊಂಡಿದ್ದಾರೆ.ಒಂದೊಮ್ಮೆ ಕೊಡಗಿನ ಪ್ರಮುಖ ತಾಲೂಕುಗಳಲ್ಲಿ ಒಂದಾಗಿದ್ದ ನಂಜರಾಯಪಟ್ಟಣ, ಕೊಡಗು ರಾಜರ ಆಳ್ವಿಕೆಯ ದಿನಗಳಲ್ಲಿ ದೇಗುಲಗಳ ಪಟ್ಟಣವಾಗಿದ್ದರೆ, ಟಿಪ್ಪುವಿನ ಆಳ್ವಿಕೆಯ ಸಂದರ್ಭ ಅಲ್ಲಿನ ದೇವಾಲಯಗಳು ಭಗ್ನಗೊಂಡು ಪ್ರಸಕ್ತ ನಂಜರಾಯಪಟ್ಟಣದಲ್ಲಿ ಸಂಚರಿಸಿದರೆ ಹಾಳು ಹಂಪೆಯನ್ನು ನೋಡಿದ ಅನುಭವವಾಗಲಿದೆ.

ಈ ನಡುವೆ ತೀರಾ ಇತ್ತೀಚೆಗೆ ಜೀರ್ಣೋದ್ಧಾರಗೊಂಡಿರುವ ಶ್ರೀ ನಂಜುಂಡೇಶ್ವರ ದೇವಾಲಯ ಭಕ್ತರಿಗೆ ನೆಮ್ಮದಿಯ ಕ್ಷೇತ್ರವಾಗಿದ್ದರೆ, ದುಬಾರೆ ಯೊಳಗಿನ ದ್ವೀಪ ಪ್ರವಾಸಿಗರ ಜನ ಕ್ರೀಡೆಯ ತಾಣವಾಗುವದ ರೊಂದಿಗೆ, ಗ್ರಾಮೀಣ ಜನತೆಗೆ ಬದುಕು ಕಲ್ಪಿಸಿದೆ. ಅಲ್ಲಿ ವಿಶೇಷವಾಗಿ ರ್ಯಾಫ್ಟಿಂಗ್ ಮತ್ತು ವ್ಯಾಪಾರೋದ್ಯಮದಿಂದ ನಂಜರಾಯಪಟ್ಟಣ ಸುತ್ತಮುತ್ತಲಿನ ನಿವಾಸಿಗಳು, ನಿರುದ್ಯೋಗಿ ಯುವಕರು, ಹಾಡಿಯ ಗಿರಿಜನರು ಜೀವನೋ ಪಾಯ ಕಂಡು ಕೊಂಡಿರುವದು ಗೋಚರಿಸಲಿದೆ. ದಿನೇ ದಿನೇ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿದ್ದು, ಅನೇಕ ಸಮಸ್ಯೆಗಳು ಹುಟ್ಟಿಕೊಂಡಿವೆ. ಮುಖ್ಯವಾಗಿ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ಕೈಗೊಳ್ಳಬೇಕಿರುವ ಮೂಲಭೂತ ಸೌಕರ್ಯಗಳ ಕೊರತೆ ಒಂದೆಡೆ ಯಾದರೆ, ಬರುವ ಪ್ರವಾಸಿಗರು ಕೇವಲ ಮೋಜು-ಮಸ್ತಿಯಲ್ಲಿ ತೊಡಗುವ ಮೂಲಕ ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡುತ್ತಿರುವದು ಎದ್ದು ಕಾಣಲಿದೆ.

ಕೊಡಗು ಜಿಲ್ಲೆಯ ಮಟ್ಟಿಗೆ ಅತ್ಯಧಿಕ ಪ್ರವಾಸಿಗರ ತಾಣವಾಗಿ ದುಬಾರೆ ಕಂಡುಬಂದರೆ, ಆ ಪ್ರಮಾಣದಲ್ಲಿ ಪ್ರವಾಸಿಗರು ನಿತ್ಯ ಬಂದು ಹೋಗಲು ಸರಿಯಾದ ರಸ್ತೆ ಮಾರ್ಗ ಇಲ್ಲಿ ಕಂಡು ಬರುವದಿಲ್ಲ. ಕೇವಲ ರ್ಯಾಫ್ಟಿಂಗ್‍ನತ್ತ ಎಲ್ಲರೂ ಕಣ್ಣಿಟ್ಟಿದ್ದು, ರ್ಯಾಫ್ಟಿಂಗ್ ನಡೆಸುವವರೇ ಮೂಲಭೂತ ಸೌಕರ್ಯ ಮಾಡಿಕೊಳ್ಳುವಂತಾಗಿದೆ. ಬದಲಾಗಿ ದುಬಾರೆ ಆನೆ ಶಿಬಿರ ಮತ್ತು ಅಲ್ಲಿನ ಹಾಡಿಗೆ ನಿತ್ಯ ತೆರಳುವ ಗಿರಿಜನರ ಸಹಿತ ಪ್ರವಾಸಿಗರು ಕೂಡ ಮೋಟಾರು ದೋಣಿಯನ್ನು ಅವಲಂಬಿತರಾಗಿದ್ದಾರೆ. ಪರಿಣಾಮ ಹೊಳೆಯಲ್ಲಿ ನಿರಂತರ ಮಣ್ಣು ಕೊರೆತದೊಂದಿಗೆ ದ್ವೀಪ ಪ್ರದೇಶ ವರ್ಷದಿಂದ ವರ್ಷಕ್ಕೆ ಕಿರಿದಾಗಿ ಅಲ್ಲಿನ ಮರಗಳು ಬೇರು ಸಡಿಲಗೊಂಡು ಅಪಾಯದ ಅಂಚಿನಲ್ಲಿವೆ.

ಒಂದೊಮ್ಮೆ ಪ್ರವಾಸಿಗರನ್ನು ಅತ್ಯಾಕರ್ಷಿಸುತ್ತಿದ್ದ ಗಜಪಡೆಗಳ ಕಾವೇರಿ ಸ್ನಾನದಂತಹ ಜಲಕ್ರೀಡೆ ಇಂದು ಮರೆಯಾಗಿ, ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರನ್ನು ಪುಳಕಗೊಳಿಸುತ್ತಿದ್ದ ಸಫಾರಿ (ಆನೆ ಸವಾರಿ) ಇಂದು ಕಾಣದಾಗಿದೆ. ಈ ರೀತಿಯ ಬದಲಾವಣೆಗೆ ದುಬಾರೆಯಲ್ಲಿ ಕಾರಣಗಳನ್ನು ಹುಡುಕುತ್ತಾ ಹೋದರೆ ಅನೇಕ ಅಂಶಗಳು ಒಂದೊಂದಾಗಿ ಗರಿಬಿಚ್ಚಿ ಕೊಳ್ಳಲಿದ್ದು, ಜವಾಬ್ದಾರಿ ಯುತರ ಹೊಣೆಗಾರಿಕೆಯೊಂದಿಗೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣಲಿದೆ.