ಮಡಿಕೇರಿ, ಡಿ. 23: ಕುಶಾಲನಗರದ ಕೊಡಗು ಸುನ್ನಿ ಜಿಸಿಸಿ ಡೆವಲಪ್‍ಮೆಂಟ್ ಗ್ರೂಪ್ ಮತ್ತು ನೂರೇ ಮದೀನ ಮೋರಲ್ ಅಕಾಡೆಮಿ ಹಿಫ್ಲುಲ್ ಖುರ್‍ಆನ್ ಸಂಸ್ಥೆಯ ಆಶ್ರಯದಲ್ಲಿ ತಾ. 25 ರಂದು ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಹುಬ್ಬುರುಲ್ ರಸೂಲ್ ಕಾರ್ಯಕ್ರಮ ಹಾಗೂ ಬಡ ಯುವತಿಯೊಬ್ಬಳ ಉಚಿತ ವಿವಾಹ ಸಮಾರಂಭ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಎಂ.ಎ.ಉಸ್ಮಾನ್ ಅವರು, ಹುಬ್ಬರುಲ್ ರಸೂಲ್ ಕಾರ್ಯಕ್ರಮ ಅಂದು ಸಂಜೆ 3ಗಂಟೆಗೆ ನಡೆಯಲಿದ್ದು, ಇದರ ಅಂಗವಾಗಿ ಮಾದಾಪಟ್ಟಣದ ಬಡ ಮುಸ್ಲಿಂ ಯುವತಿಯೊಬ್ಬಳ ವಿವಾಹ ಸಮಾರಂಭವನ್ನು ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ದಾನಿಗಳ ನೆರವಿನೊಂದಿಗೆ ಆಯೋಜಿಸಲಾಗಿದೆ ಎಂದು ಹೇಳಿದರು.

ಕಳೆದ 5 ತಿಂಗಳ ಹಿಂದೆ ನೂರೇ ಮದೀನ ಮೋರಲ್ ಅಕಾಡೆಮಿ ಹಿಫ್ಲುಲ್ ಖುರ್‍ಆನ್ ಸಂಸ್ಥೆ ಆರಂಭವಾಗಿದ್ದು, ಬಡ ಕುಟುಂಬದ 6ರಿಂದ 12 ವರ್ಷದೊಳಗಿನ ಮಕ್ಕಳಿಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಉಚಿತವಾಗಿ ಖುರ್‍ಆನ್ ಕಂಠಪಾಠ ಕಲಿಸಲಾಗುತ್ತಿದೆ. ಕಳೆದ 3-4 ತಿಂಗಳುಗಳಲ್ಲೇ ಮಕ್ಕಳು ಖುರ್‍ಆನ್‍ನ ಮೂರು ಅಧ್ಯಾಯದವರೆಗೆ ಕಂಠಪಾಠ ಮಾಡಿದ್ದಾರೆ ಎಂದು ತಿಳಿಸಿದರು.

ದಾನಿಗಳ ಮತ್ತು ಸಾರ್ವಜನಿಕರ ಸಹಕಾರದಿಂದ ಸಂಸ್ಥೆಯನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸುಮಾರು 35-40 ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡುವ ವಸತಿ ಶಾಲೆಯೊಂದನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ ಹಲವಾರು ಸಮಾಜಮುಖಿ ಮತ್ತು ಮುಸ್ಲಿಂ ಬಾಂಧವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ. ಮುಂದಿನ ವರ್ಷ ಕನಿಷ್ಟ 5 ಮಂದಿ ಬಡ ಮುಸ್ಲಿಂ ಯುವತಿಯರಿಗೆ ವಿವಾಹ ಮಾಡಿಕೊಡುವ ಗುರಿ ಹೊಂದಲಾಗಿದೆ ಎಂದು ನುಡಿದರು.

ತಾ. 25 ರಂದು ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಇಲ್ಯಾಸ್ ಅಲ್ ಹೈದ್ರೂಸಿ ತಂಞಳ್ ವಹಿಸಲಿದ್ದು, ಕೊಡಗು ಜಿಲ್ಲಾ ನಾಯಿಬ್ ಖಾಝಿ ಮಹಮದ್ ಉಸ್ತಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಎಸ್‍ಎಸ್‍ಎಫ್ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳ ಪದಾಧಿಕಾರಿ ಗಳು, ಧಾರ್ಮಿಕ ಮುಖಂಡರು, ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಮಾಜಿ ಸಚಿವ ಬಿ.ಎ.ಜೀವಿಜಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಉಸ್ಮಾನ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಸೂಫಿ ಹಾಗೂ ಸದಸ್ಯ ಸಿದ್ದಿಕ್ ಜುಹಾರಿ ಹಾಜರಿದ್ದರು.