ಕುಶಾಲನಗರ, ಡಿ. 23: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ಕಳೆದ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಹೋರಾಟದ 3ನೇ ಹಂತದ ಹೋರಾಟಕ್ಕೆ ಚಾಲನೆ ನೀಡಲಾಯಿತು.

ಕುಶಾಲನಗರವನ್ನು ಕಾವೇರಿ ತಾಲೂಕಾಗಿ ರಚಿಸಬೇಕೆಂದು ಆಗ್ರಹಿಸಿ 7ನೇ ಹೊಸಕೋಟೆಯ ಸ್ಥಾನೀಯ ಸಮಿತಿ ಆಶ್ರಯದಲ್ಲಿ ಧರಣಿ ನಡೆಯಿತು. ಸಮಿತಿ ಅಧ್ಯಕ್ಷ ಕೆರೆಮನೆ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಧರಣಿಯಲ್ಲಿ ಸಮಿತಿ ಪದಾಧಿಕಾರಿಗಳು ಕಾವೇರಿ ತಾಲೂಕು ರಚಿಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಕೇಂದ್ರ ಸಮಿತಿ ಪ್ರಮುಖ ಅಬ್ದುಲ್ ರಜಾಕ್, ಈಗಾಗಲೆ ಎರಡು ಹಂತದ ಹೋರಾಟ ಕೈಗೊಂಡು ಕಾವೇರಿ ತಾಲೂಕು ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಲಾಗಿದೆ. ಆದರೂ ಕೂಡ ಕುಶಾಲನಗರವನ್ನು ಕಡೆಗಣಿಸಿರುವದು ತೀವ್ರ ನಿರಾಸೆಯುಂಟು ಮಾಡಿದೆ ಎಂದರು.

ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಬೃಹತ್ ಜನಾಂದೋಲನ, ಬಂದ್ ನಡೆಸುವ ಮೂಲಕ ತಾಲೂಕು ರಚನೆಗೆ ಪ್ರಬಲವಾಗಿ ಆಗ್ರಹಿಸಲಾಗಿದೆ. ಜನವರಿ 1 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ, ಪಾದಯಾತ್ರೆ ಸೇರಿದಂತೆ ಜನವರಿ 9 ರಂದು ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗಳ ಬಳಿ ಹಕ್ಕೊತ್ತಾಯ ಮಂಡಿಸಲಾಗುವದು ಎಂದರು.

ಧರಣಿಯಲ್ಲಿ 7ನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷೆ ಸುಮಲತಾ, ಉಪಾಧ್ಯಕ್ಷ ಮುಸ್ತಾಫ, ಸದಸ್ಯೆ ಪುಷ್ಪಾ, ಸಮಿತಿ ಪ್ರಮುಖರಾದ ರಮೇಶ್, ಅಬ್ದುಲ್, ರಾಮಚಂದ್ರ, ಜಬ್ಬಾರ್, ಸುವರ್ಣ ಮತ್ತಿತರರು ಇದ್ದರು.