ಮಡಿಕೇರಿ, ಡಿ. 23: ವರ್ಷಾಂತ್ಯದೊಂದಿಗೆ ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಮತ್ತು ಮಡಿಕೇರಿಯತ್ತ ಇಂದು ನೂರಾರು ಬಸ್‍ಗಳ ಸಹಿತ ಸಾವಿರಾರು ಸಂಖ್ಯೆಯ ವಾಹನಗಳಲ್ಲಿ ಜನಸಾಗಾರವೇ ಹರಿದು ಬರುತ್ತಿದ್ದ ದೃಶ್ಯ ಗೋಚರಿಸಿತು.

ಜಿಲ್ಲಾ ಕೇಂದ್ರ ಮಡಿಕೇರಿಯ ಎಲ್ಲ ರಸ್ತೆಗಳಲ್ಲಿ ಹಗಲಿನಿಂದಲೇ ಸಾಗಿಬರುತ್ತಿದ್ದ ವಾಹನಗಳು, ಮಾರ್ಗದ ಇಕ್ಕಡೆಗಳಲ್ಲಿ ನಿಲುಗಡೆಗೂ ಜಾಗವಿಲ್ಲದೆ ತಾಸುಗಟ್ಟಲೆ ಇತರ ವಾಹನಗಳು ಸಾಗಲು ಪರದಾಡಬೇಕಾಯಿತು.

ಸಂಜೆ ಗತ್ತಲೆ ನಡುವೆ ನಗರದ ಸುದರ್ಶನ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತ, ರಾಜಾಸೀಟ್ ಮಾರ್ಗ, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಎಲ್ಲೆಡೆ ವಾಹನಗಳು ರೈಲ್ವೇ ಬೋಗಿಗಳಂತೆ ಆಮೆಗತಿಯ ಸಂಚಾರದೊಂದಿಗೆ ಗೋಚರಿಸಿದವು.

ಅಲ್ಲಲ್ಲಿ ತಿರುವುಗಳು, ಮುಖ್ಯ ಮಾರ್ಗದಿಂದ ಇತರೆಡೆಗೆ ಸಾಗುವ ಹಾದಿಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡುವತ್ತ ಕರ್ತವ್ಯ ನಿರತ ಪೊಲೀಸರು ಹೈರಾಣಾದಂತೆ ಕಂಡುಬಂತು.

ಒಟ್ಟಿನಲ್ಲಿ ವಾಹನ ದಟ್ಟಣೆಯು ಈ ರಾತ್ರಿ ಜನಜಂಗುಳಿ ನಡುವೆ ದಸರಾ ದಿನಗಳನ್ನು ನೆನಪಿಸುವಂತಿತ್ತು.