ಮಡಿಕೇರಿ, ಡಿ. 23: ಮರಗೋಡು ಗ್ರಾಮ ಪಂಚಾಯಿತಿಗೆ ಒಳಪಡುವ ಪÀÅಟ್ಟ ಹೊಸ್ಕೇರಿ ಗ್ರಾಮದ ಪರಿಸರ ಹಾಗೂ ಗ್ರಾಮಸ್ಥರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಸವಾಲೊಡ್ಡುವಂತಹ ಬೃಹತ್ ಕಂಪೆನಿಯೊಂದು ಕೋಟ್ಯಾಂತರ ರೂ. ವೆಚ್ಚದಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ವಸತಿ ಶಾಲೆ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥೆ ಹಾಗೂ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೆÉೀಜಿನ ನಿವೃತ್ತ ಪ್ರಾಂಶುಪಾಲೆÀ ಪುಷ್ಪಾ ಕುಟ್ಟಣ್ಣ, ಗ್ರಾಮದ ಪರಿಸರ ಮತ್ತು ಕೃಷಿಕರ ನೆಮ್ಮದಿಯ ಬದುಕಿನ ಮೇಲೆ ಅಗಾಧ ಪರಿಣಾಮ ಬೀರಬಲ್ಲ ಬೃಹತ್ ಯೋಜನೆಗೆ ಸಿದ್ಧತೆ ನಡೆದಿದೆ. ಇದನ್ನು ತಡೆಯಲು ‘ಹೊಸ್ಕೇರಿ ಗ್ರಾಮ ರಕ್ಷಿಸಿ’ ಎನ್ನುವ ಘೋಷಣೆಯಡಿ ಗ್ರಾಮಸ್ಥರನ್ನೆಲ್ಲ ಒಗ್ಗೂಡಿಸಿ ವೇದಿಕೆಯೊಂದನ್ನು ಹುಟ್ಟು ಹಾಕಲಾಗುವದು. ಜಿಲ್ಲೆಯ ಜನಪರ ಸಂಘÀಟನೆಗಳನ್ನು ಸೇರ್ಪಡೆ ಗೊಳಿಸಿಕೊಂಡು ಹೋರಾಟವನ್ನು ಆರಂಭಿಸುವದಾಗಿ ತಿಳಿಸಿದರು.

ಗ್ರಾಮ ವ್ಯಾಪ್ತಿಯಲ್ಲಿ ಖರೀದಿಸಿರುವ ಕಾಫಿ ತೋಟ ಮತ್ತು ಕೃಷಿ ಭೂಮಿಯಲ್ಲಿ 500 ಕೋಟಿಗೂ ಅಧಿಕ ಹಣ ಹೂಡಿಕೆಯ ಮೂಲಕ ಅಂತರ್ರಾಷ್ಟ್ರೀಯ ಮಟ್ಟದ ವಸತಿ ಶಾಲೆ ಮೊದಲಾದವಗಳನ್ನು ನಿರ್ಮಿಸಲು ಕಂಪೆನಿಯೊಂದು ಮುಂದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ನೀಡಿ, ಯಾವದೇ ಕಾರಣಕ್ಕೂ ಯೋಜನೆಗೆ ಅವಕಾಶ ನೀಡದಂತೆ ಮನವಿ ಮಾಡಿರುವದಾಗಿ ತಿಳಿಸಿದರು. ಅಂತರ್ರಾಷ್ಟ್ರೀಯ ಮಟ್ಟದ ವಸತಿ ಶಾಲೆ ಗ್ರಾಮ ವ್ಯಾಪ್ತಿಯಲ್ಲಿ ತಲೆ ಎತ್ತಿದರೆ ಪರಿಸರ ಮಾಲಿನ್ಯದೊಂದಿಗೆ ಗ್ರಾಮದ ಜನತೆಯ ಸಾಮಾಜಿಕ ಬದುಕು ಅಭದ್ರವಾಗುತ್ತದೆ ಎಂದು ಪುಷ್ಪಾ ಕುಟ್ಟಣ್ಣ ಆತಂಕ ವ್ಯಕ್ತಪಡಿಸಿದರು.

ಗ್ರಾಮಸ್ಥ ಸುನಿಲ್ ಬಿ.ಎಸ್. ಮಾತನಾಡಿ, ಬೃಹತ್ ಕಂಪೆನಿ ತನ್ನ ಉದ್ದೇಶಕ್ಕೆ ಅನುಗುಣವಾಗಿ ಹೊಸ್ಕೇರಿ ಯಲ್ಲಿ ಖರೀದಿಸಿರುವ ಜಾಗದಲ್ಲಿ ಮಣ್ಣಿನ ಪರೀಕ್ಷೆಗೆ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಭಾರೀ ಗಾತ್ರದ ಕಟ್ಟಡಗಳು ತಲೆ ಎತ್ತಿದಲ್ಲಿ ಗ್ರಾಮ ಪ್ರಮುಖವಾಗಿ ಕುಡಿಯುವ ನೀರಿನ ಸಂಕಷ್ಟಕ್ಕೆ ಸಿಲುಕುವದು ಎಂದರು.

ಮರಗೊಡು ಗ್ರಾ.ಪಂ. ಸದಸ್ಯ ಚಿದಾನಂದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇಲ್ಲಿಯವರೆಗೂ ಸಂಬಂಧಪಟ್ಟ ಕಂಪೆನಿ ತನ್ನ ನಿರ್ಮಾಣ ಕಾಮಗಾರಿ ಗಳಿಗೆ ಗ್ರಾಮ ಪಂಚಾಯಿತಿಯ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಿಲ್ಲ. ಆದರೆ, ವಾರದ ಹಿಂದೆ ದೂರವಾಣಿ ಮೂಲಕ ಸಂಪರ್ಕಿಸಿ ದ್ದಾರೆಂದು ತಿಳಿಸಿದರು. ಗ್ರಾಮಸ್ಥ ಬಿ.ಎಂ. ಸೋಮಯ್ಯ ಮಾತನಾಡಿ, ಅಂತರ್ರಾಷ್ಟ್ರೀಯ ಮಟ್ಟದ ವಸತಿ ಶಾಲೆ ಇನ್ನಿತರ ಬೃಹತ್ ನಿರ್ಮಾಣಗಳು ಕೇವಲ ಹೊಸ್ಕೇರಿ ಮಾತ್ರವಲ್ಲ ಮರಗೋಡು, ಅರೆಕಾಡು, ಅಭ್ಯತ್ ಮಂಗಲ ಗ್ರಾಮಗಳ ಮೇಲೂ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ ಎಂದರು. ಗ್ರಾಮಸ್ಥ ಚಂದನ್ ಅಪ್ಪಯ್ಯ ಮಾತನಾಡಿ, ಕಂಪೆನಿ ಖರೀದಿಸಿರುವ ಜಾಗ ಎಲಿಫೆಂಟ್ ಕಾರಿಡಾರ್ ವ್ಯಾಪ್ತಿಗೆ ಒಳಪಡುತ್ತದೆ ಎಂದು ಗಮನ ಸೆಳೆದರು. ಗೋಷ್ಠಿಯಲ್ಲಿ ಗ್ರಾಮಸ್ಥ ಸಿ.ಪಿ. ಸುಭಾಷ್ ಉಪಸ್ಥಿತರಿದ್ದರು.