ವೀರಾಜಪೇಟೆ, ಡಿ. 23: ಇಂದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೂ ದೇಶದಲ್ಲಿ ಮೋಸ ವಂಚನೆ ಭ್ರಷ್ಟಾಚಾರ ತಾಂಡವವಾಡುತ್ತಿರುವದನ್ನು ಅಧ್ಯಯನದ ಮೂಲಕ ಸಮಾಜಕ್ಕೆ ಅರಿವು ಮೂಡಿಸಬೇಕಾಗಿದೆ. ಶಿಕ್ಷಣದಿಂದ ಸಮಾಜ ತಿದ್ದುವ ಕೆಲಸ ಸಾಧ್ಯವಾಗುತ್ತಿಲ್ಲ. ವಿದ್ಯಾಸಂಸ್ಥೆಯಲ್ಲಿ ಸನ್ನಡತೆಯ ಮಿತ್ರನಿಂದ ವಿದ್ಯಾರ್ಥಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು “ಶಕಿ”್ತ ಕನ್ನಡ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಹೇಳಿದರು.

ವೀರಾಜಪೇಟೆಯ ತೆಲುಗರಬೀದಿಯ ಕೂರ್ಗ್ ವ್ಯಾಲಿ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅನಂತಶಯನ ಸಂಸ್ಥೆಯ ಪ್ರತಿಯೊಬ್ಬ ವಿದ್ಯಾರ್ಥಿಯು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಮುಂದೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವಂತಾಗಬೇಕು. ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿದರೆ ಸಾಲದು. ಅವರ ವಿದ್ಯಾಭ್ಯಾಸ ಇತರ ಚಟುವಟಿಕೆಗಳ ಮೇಲೆ ಪೂರ್ಣ ನಿಗಾ ಇರಿಸಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ದಕ್ಷ ಹಾಗೂ ಪ್ರಾಮಾಣಿಕತೆಯನ್ನು ವಿದ್ಯಾರ್ಥಿ ಜೀವನದಿಂದಲೇ ಅಳವಡಿಸಿಕೊಳ್ಳುವಂತಾಗಬೇಕು ಎಂದರು.

ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಶಾಂತರಾಂ ಕಾಮತ್ ಮಾತನಾಡಿ ಇಂದಿನ ವಿದ್ಯಾರ್ಥಿಗಳ ಜೀವನದಲ್ಲಿ ಸಮಾಜ ಸೇವೆಯೂ ಒಂದು ಅಂಗವಾಗಿದ್ದು ಇದಕ್ಕಾಗಿ ರೋಟರಿ ಸಂಸ್ಥೆ ವಿದ್ಯಾ ಸಂಸ್ಥೆಗಳಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಇಂಟರಾಕ್ಟ್ ಕ್ಲಬ್‍ಗೆ ಚಾಲನೆ ನೀಡುತ್ತಿದೆ. ಇದರಿಂದ ಮಕ್ಕಳಿಗೆ ಶಿಕ್ಷಣದೊಂದಿಗೆ ಸಮಾಜ ಸೇವೆಯ ತರಬೇತಿ ದೊರೆಯಲಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್ ಮಾತನಾಡಿ ಇಂದು ಶಿಕ್ಷಣ ಎಂಬದು ಸಮಾಜದ ಶಕ್ತಿ. ಶಿಕ್ಷಣ ಸಮಾಜವನ್ನು ಬದಲಾಯಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶದ ಉತ್ತಮ ಪ್ರಜೆಯನ್ನಾಗಿಸುವದು ಅವರ ಮೂಲ ಭೂತ ಕರ್ತವ್ಯ ಹಾಗೂ ಇದರಿಂದ ಸಮಾಜಕ್ಕು ಒಳಿತಾಗಲಿದೆ. ಶಿಕ್ಷಣದಿಂದ ಸಮಾಜದ ಏಳಿಗೆಗೆ ಹಾಗೂ ಪ್ರಗತಿಗೆ ಸಾಧ್ಯವಾಗಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸುಮಾ ಚಿತ್ರಭಾನು, ಸಂಸ್ಥೆಯ ಬಾತ್ಮೀದಾರ ಪಿ.ಕೆ.ಚಿತ್ರಭಾನು ಉಪಸ್ಥಿತರಿದ್ದರು.

ವಿದ್ಯಾರ್ಥಿ ರಮೇಶ್ ಇರ್ವೀ ಸ್ವಾಗತಿಸಿ, ಶಿಕ್ಷಕಿಯರಾದ ಪಿ.ಕೆ.ಧನಲಕ್ಷ್ಮಿ, ಶ್ವೇತಾ, ಟೀನಾ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕ ರಾಘವೇಂದ್ರ ನಿರೂಪಿಸಿದರು. ವಿದ್ಯಾರ್ಥಿನಿ ಜೋಸ್ನಾ ವಂದಿಸಿದರು.

ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.