ಮೂರ್ನಾಡು, ಡಿ. 23: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರವನ್ನು ಕಾಕೋಟು ಪರಂಬು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮೋಹಿನಿ ಕುಮಾರಿ ಸಸಿಗೆ ನೀರೆರೆಯುವದರ ಮೂಲಕ ಉದ್ಘಾಟಿಸಿದರು.

ಕಾಕೋಟುಪರಂಬು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏಳು ದಿನಗಳ ಕಾಲ ಆಯೋಜಿಸಲಾಗಿರುವ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ ಆಗಮಿಸಿ ಮಾತನಾಡಿ, ತ್ಯಾಗ ಮನೋಭಾವದಿಂದ ಕೆಲಸ ಮಾಡಿದರೆ ಮಾತ್ರ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು. ಭ್ರಷ್ಟ ಸಮಾಜದಲ್ಲಿ ನಿಷ್ಟಾವಂತ ಅಧಿಕಾರಿಗಳು ಮೂಲೆಗುಂಪಾಗುತ್ತಿದ್ದಾರೆ. ವಿದ್ಯಾರ್ಥಿಗಳು ಭ್ರಷ್ಟತೆಯನ್ನು ಹೋಗಲಾಡಿಸಲು ಪಣತೊಡಬೇಕು. ಪ್ರತಿಯೊಬ್ಬರು ಕೈ ಜೋಡಿಸಿದರೆ ದೇಶ ಅಭಿವೃದ್ಧಿ ಕಾಣುತ್ತದೆ ಎಂದರು.

ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಪಡೆದುಕೊಳ್ಳಲು ವಿಫುಲ ಅವಕಾಶವಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವದರೊಂದಿಗೆ ಶಿಬಿರದಲ್ಲಿನ ಉತ್ತಮ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾಕೋಟುಪರಂಬು ಕಾಲಭೈರವ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಂಡೇಟಿರ ಹ್ಯಾರಿ ಪೆಮ್ಮಯ್ಯ ಶಿಬಿರದ ಧ್ವಜಾರೋಹಣಗೈದರು.

ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ ಬಾಚೆಟ್ಟಿರ ಜಿ. ಮಾದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಪಳಂಗಂಡ ಎ. ಭಾಗೀರಥಿ, ಕಾಕೋಟುಪರಂಬು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕುಸುಮಾವತಿ, ಸಹ ಶಿಕ್ಷಕಿ ಎನ್.ಪಿ. ಲೀಲಾವತಿ, ವೀರಾಜಪೇಟೆ ತಾಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ಶಿಬಿರಾಧಿಕಾರಿ ನೆರಪಂಡ ಹರ್ಷ ಮಂದಣ್ಣ, ಸಹ ಶಿಬಿರಾಧಿಕಾರಿಗಳಾದ ಹರೀಶ್ ಕಿಗ್ಗಾಲು, ನಾಟೋಳಂಡ ಸಿ. ನವೀನ್, ಕಂಬೀರಂಡ ಕೆ. ಬೋಪಣ್ಣ, ವಿದ್ಯಾ ಸಂಸ್ಥೆ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಉಪಸ್ಥಿತರಿದ್ದರು.

ಶಿಬಿರಾರ್ಥಿ ಬಿ.ಬಿ. ದಿಲನ್ ತಂಡ ಪ್ರಾರ್ಥಿಸಿ, ಕಾಲೇಜಿನ ಉಪನ್ಯಾಸಕ ಸಾದೇರ ದರ್ಶನ್ ಮಾದಪ್ಪ ಕಾರ್ಯಕ್ರಮ ನಿರೂಪಿಸಿ, ಹರೀಶ್ ಕಿಗ್ಗಾಲು ಸ್ವಾಗತಿಸಿ, ನಾಟೋಳಂಡ ಸಿ. ನವೀನ್ ವಂದಿಸಿದರು.