ಶ್ರೀಮಂಗಲ, ಡಿ. 23: ಪೊನ್ನಂಪೇಟೆ ತಾಲೂಕು ಪುನರ್‍ಚನೆಗೆ ಆಗ್ರಹಿಸಿ ಕಳೆದ 53 ದಿನಗಳಿಂದ ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಗೋಣಿಕೊಪ್ಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯ ಅಡಿಕೆ ವರ್ತಕರ ಸಂಘದವರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವದರ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭ ತಾಲೂಕು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ತಾ. 22ಕ್ಕೆ ತಲಕಾಡುವಿಗೆ ತೆರಳಿ ಲೋಕೋಪಯೋಗಿ ಸಚಿವ ಮಹದೇವಪ್ಪ ಅವರನ್ನು ಭೇಟಿ ಮಾಡಿ ತಾಲೂಕು ರಚನೆಯ ಬಗ್ಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭ ಸಚಿವರು ತಾಲೂಕು ರಚನೆ ಬಗ್ಗೆ ಮನವಿ ಎಂದು ಕೇಳಬೇಡಿ, ತಾಲೂಕು ರಚನೆಗೆ ಎಲ್ಲಾ ಅರ್ಹತೆ ಇದ್ದ ಮೇಲೆ ಅದು ನಿಮ್ಮ ಹಕ್ಕು ಎಂದು ಕೇಳಿ ಎಂದು ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕಂಜಿತಂಡ ಕೆ.ಬೆಳ್ಯಪ್ಪ, ಕಾರ್ಯದರ್ಶಿ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ ತಾಲೂಕು ರಚನೆ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಬೇಡಿಕೆ ಈಡೇರುವವರೆಗೆ ನೀಡಲಾಗುವದೆಂದು ಹೇಳಿದರು.

ದುಡಿಕೊಟ್ಟ್ ಪಾಟ್‍ನೊಂದಿಗೆ ಬೆಂಬಲ : ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪೊನ್ನಂಪೇಟೆಯ ಚೆಪ್ಪುಡಿರ ಪೊನ್ನಪ್ಪ, ಕಾಳಿಮಾಡ ಮೋಟಯ್ಯ, ಐನಂಡ ಮಂದಣ್ಣ, ಬೊಳ್ಳಿಮಾಡ ಧನು, ಬೊಳಿಯಂಗಡ ದಾದು ಪೂವಯ್ಯ ಅವರು ದುಡಿಕೊಟ್ಟ್ ಪಾಟ್‍ನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರತಿಭಟನೆಯಲ್ಲಿ ಮನೆಯಪಂಡ ವಿಠಲ ಅಯ್ಯಪ್ಪ, ಚೆಪ್ಪುಡಿರ ಬೊಸ್ ಬೋಪಯ್ಯ, ಎಪಿಎಂಸಿ ವರ್ತಕ ಸಂಘದ ಪಂದ್ಯಂಡ ಹರೀಶ್, ಶುಭ ಮುತ್ತಪ್ಪ, ಕೃಪ ಕಾವೇರಪ್ಪ, ಮನು ದೇವಯ್ಯ, ಪ್ರವೀಣ್, ದರ್ಶನ್, ರಂಜಿ, ಕುಪ್ಪಂಡ ರಾಜ, ದಿನೇಶ್, ಪೂಣಚ್ಚ, ಲಾಲ, ನೆಲ್ಲಿರ ಮಧು, ನೂರೇರ ಅಚ್ಚಪ್ಪ, ಮಾಚಿಮಂಡ ರಾಜೀವ್ ಸೇರಿದಂತೆ ಹಲವರು ಭಾಗವಹಿಸಿದ್ದರು.