ಸುಂಟಿಕೊಪ್ಪ, ಡಿ. 23: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ 2016-17ನೇ ಸಾಲಿನಲ್ಲಿ ರೂ. 72,23,531 ಆದಾಯ ಬಂದಿರುವದಾಗಿ ಜಮಾಬಂದಿಯಲ್ಲಿ ದಾಖಲೆ ನೀಡಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ತರಕಾರಿ, ತೆಂಗಿನಕಾಯಿ ವ್ಯಾಪಾರ ನಡೆಸುವ ವರ್ತಕರಿಂದ ಬಾಡಿಗೆ ವಸೂಲಿ ಮಾಡಿರುವದು ದಾಖಲಿಸಿರುವದಿಲ್ಲ ಎಂದು ಗ್ರಾಮಸ್ಥ ಎಂ.ಎ. ವಸಂತ್ ಅಸಮಾಧಾನ ವ್ಯಕ್ತಪಡಿಸಿದರು.

ಸುಂಟಿಕೊಪ್ಪ ಗ್ರೇಡ್1 ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ಜಮಾಬಂದಿ ಸಭೆಯು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿಂದಿನ ಜಮಾಬಂದಿ ಸಭೆಯಲ್ಲಿಯೂ ಮಾರುಕಟ್ಟೆಯಲ್ಲಿ ಪ್ರತಿದಿನ ವ್ಯಾಪಾರ ಮಾಡುತ್ತಿರುವ ವರ್ತಕರಿಂದ ಬಾಡಿಗೆ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ದಾಖಲಿಸದೆ ಇರುವದು ಪ್ರಸ್ತಾಪಿಸಲಾಗಿತ್ತು. ಇಂದಿನ ಜಮಾಬಂದಿಯಲ್ಲೂ ಜಮಾತಖ್ತೆಯಲ್ಲಿ ಅದನ್ನು ಸ್ಪಷ್ಟವಾಗಿ ದಾಖಲಿಸದೆ ಇತರ ಎಂದು ದಾಖಲಿಸಿರುವದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ ಎಂದು ವಸಂತ್, ಮಂಜುನಾಥ, ಇಬ್ರಾಹಿಂ, ಜಿ. ರಾಜನ್ ಹೇಳಿದರು.

ಮಾರುಕಟ್ಟೆಯಲ್ಲಿ ತರಕಾರಿ, ಎಲೆ-ಅಡಿಕೆ, ತೆಂಗಿನಕಾಯಿ ಪ್ರತಿನಿತ್ಯ ವ್ಯಾಪಾರ ಮಾಡುವ ವರ್ತಕರಿಂದ ನೆಲಬಾಡಿಗೆ ವಸೂಲು ಮಾಡಲಾಗುತ್ತದೆ. ರಶೀದಿ ನೀಡುತ್ತೇವೆ ಎಂದು ಅಧ್ಯಕ್ಷರು ಉತ್ತರಿಸಿದರು. ಮುಂದುವರಿದ ಕಾಮಗಾರಿ ಎಂದು 2 ಕಡೆ ಕಾಮಗಾರಿ ನಡೆಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಗ್ರಾಮಸ್ಥ ಇಬ್ರಾಹಿಂ ಅವರಿಗೆ ಉತ್ತರಿಸಿದ ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಉದ್ಯೋಗಖಾತ್ರಿ ಪಂಚಾಯಿತಿ ನಿಧಿ ಹೀಗೆ ಬೇರೆ ಬೇರೆ ಸ್ಕೀಂನಲ್ಲಿ ನಿರ್ಮಿಸಿದ ಕಾಮಗಾರಿ ಆಗಿರುವದರಿಂದ ಈ ರೀತಿ ನಮೂದಿಸಲಾಗುತ್ತದೆ ಎಂದು ಹೇಳಿದರು.

ಮಾಜಿ ಗ್ರಾ.ಪಂ. ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್ ಗ್ರಾಮ ಪಂಚಾಯಿತಿಯ ಸ್ವಚ್ಛ ಭಾರತ್ ಮಿಷನ್ (ಎಸ್.ಬಿ.ಎಂ) ಯೋಜನೆಯಡಿ ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಲು ತಲಾ ರೂ. 12,000 ನೀಡಲಾಗಿದೆ ಈ ಹಿಂದೆ ಪ್ರಯೋಜನ ಪಡೆದ ಫಲಾನುಭವಿಗಳಿಗೆ ಮತ್ತೆ ಸೌಲಭ್ಯ ಸಿಗದಂತೆ ಎಚ್ಚರ ವಹಿಸಬೇಕೆಂದು ಹೇಳಿದರು. ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಸೋಮವಾಪೇಟೆ ತಾ.ಪಂ. ಸಹಾಯಕ ನಿರ್ದೇಶಕ ಡಿ.ಬಿ. ಸುನಿಲ್, ತಾ.ಪಂ. ಸದಸ್ಯ ಓಡಿಯಪ್ಪನ ವಿಮಾಲಾವತಿ, ಪಿಡಿಓ ಮೇದಪ್ಪ, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ ಸದಸ್ಯರುಗಳಾದ ಶಾಹೀದ್, ಕೆ.ಇ. ಕರೀಂ, ಎ. ಶ್ರೀಧರ್ ಕುಮಾರ್, ಸಿ. ಚಂದ್ರ, ಗಿರಿಜಾ ಉದಯಕುಮಾರ್, ನಾಗರತ್ನ ಸುರೇಶ್, ರಹೆನಾ ಫೈರೋಜ್, ಗ್ರಾ.ಪಂ. ಕಾರ್ಯದರ್ಶಿ ನಿತ್ಯಾ, ಸಿಬ್ಬಂದಿಗಳು ಉಪಸ್ಥಿತರಿದ್ದರು.