ನಾಪೋಕ್ಲು, ಡಿ. 23: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ತಾ. 27ರಿಂದ ಜನವರಿ 2ರವರೆಗೆ ಒಂದು ವಾರಗಳ ಕಾಲ ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ಶಿಕ್ಷಕರ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದ್ದಾರೆ. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಕುಂಬಗೌಡನ ರಂಜಿತ್ ಹೇಳಿದರು. ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ವಿಕಸನ ಮತ್ತು ಸಾಮರಸ್ಯ ಮೂಡಿಸುವ ಏಕೈಕ ಗುರಿಯನ್ನು ಹೊಂದಿದ್ದು ಮಕ್ಕಳನ್ನು ಸೂಕ್ತ ರೀತಿಯಲ್ಲಿ ತಯಾರು ಮಾಡಲು ಜಿಲ್ಲೆಯ ವಿವಿಧ ಶಿಕ್ಷಕರಿಗೆ ಮೂಲ ತರಬೇತಿಯನ್ನು ಏರ್ಪಡಿಸಲಾಗಿದೆ. ಶಾಲಾ ಆಡಳಿತ ಮಂಡಳಿ, ಗ್ರಾಮದ ವಿವಿಧ ಸಂಘ-ಸಂಸ್ಥೆಗಳು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ತರಬೇತಿ ಶಿಬಿರಕ್ಕೆ ಸಹಕರಿಸುವಂತೆ ಮನವಿ ಮಾಡಿದರು. ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಸಮಾಜದ ಪರಿವರ್ತನೆಗೆ ಶಿಬಿರಗಳು ಅವಶ್ಯಕ ವಾಗಿದ್ದು ಸಂಘ-ಸಂಸ್ಥೆಗಳನ್ನು ತೊಡಗಿಸಿಕೊಂಡು ಮಾದರಿ ಕಾರ್ಯಕ್ರಮವಾಗಿ ರೂಪಿಸುವಂತೆ ಮನವಿ ಮಾಡಿದರು. ಬಲ್ಲಮಾವಟಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಶಿಬಿರದ ಆಯೋಜನೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಕರವಂಡ ಸರಸು ಪೆಮ್ಮಯ್ಯ, ಆಹಾರ ಸಮಿತಿ ಅಧ್ಯಕ್ಷರಾಗಿ ತೋಲಂಡ ಅರುಣ್ ಕಾವೇರಪ್ಪ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಆರೋಗ್ಯ ಸಮಿತಿ ಅಧ್ಯಕ್ಷರಾಗಿ ಸುಲೋಚನ, ಸಾರ್ವಜನಿಕ ಸಂಪರ್ಕ ಸಮಿತಿ ಅಧ್ಯಕ್ಷರಾಗಿ ಬೈರುಡ ಮುತ್ತಪ್ಪ, ವಸತಿ ಸಮಿತಿ ಅಧ್ಯಕ್ಷರಾಗಿ ಸಿ.ಎಸ್. ಸುರೇಶ್, ನೀರು-ವಿದ್ಯುತ್ ಮತ್ತು ಸಾರಿಗೆ ಸಮಿತಿ ಅಧ್ಯಕ್ಷರಾಗಿ ಸುತನ್ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಂಬೀರಂಡ ಕಿಟ್ಟು ಕಾಳಪ್ಪ, ಖಜಾಂಚಿ ಎ.ಡಿ. ಸೋಮಯ್ಯ, ನೇತಾಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚಂಗೇಟಿರ ಅಚ್ಚಯ್ಯ, ಸಂಚಾಲಕ ಎನ್.ಪಿ. ಚಿಂಗಪ್ಪ, ಪಿಡಿಓ ವೀಣಾ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳಾ ಸಮಾಜದ ಸದಸ್ಯರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು. ನೇತಾಜಿ ಪ್ರೌಢಶಾಲಾ ಶಿಕ್ಷಕ ಸಿ.ಎಸ್. ಸುರೇಶ್ ಸ್ವಾಗತಿಸಿದರು.