ಕೂಡಿಗೆ, ಡಿ. 23: ಕೂಡಿಗೆ ಸೈನಿಕ ಶಾಲೆಯಲ್ಲಿ ಗಣಿತಶಾಸ್ತ್ರಜ್ಞರಾದ ಶ್ರೀನಿವಾಸ ರಮಾನುಜಂ ಅವರ 130ನೇ ಜನ್ಮದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.

ಶಾಲೆಯಲ್ಲಿನ 6 ರಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ತರಗತಿವಾರು ಗಣಿತ ಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸ್ಪರ್ಧೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಾದ ಟ್ಯಂಗ್ರಾಮ್, 4ಘಿ4 ಮ್ಯಾಜಿಕ್ ಚೌಕ, ರೂಬಿಕ್ಸ್ ಕ್ಯೂಬ್, ಸೆಂಟಿಪಲ್ ಫಜಲ್, ಇಂಟರ್ ಲಾಕಿಂಗ್ ಕ್ಯೂಬ್, ಬಯೋ ಫರ್ಪೆಕ್ಚುವಲ್ ಕ್ಯಾಲೆಂಡರ್, ಗಣಿತ ಶಾಸ್ತ್ರಜ್ಞರ ಜೀವನಾಧಾರಿತ ವಿಚಾರ ಸಂಕಿರಣ ಇನ್ನೂ ಮುಂತಾದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಈ ಸ್ಪರ್ಧೆಗಳನ್ನು ತಾ. 18 ರಿಂದ ತಾ. 22ರವರೆಗೆ ನಡೆಸಿ ಗಣಿತ ಸಪ್ತಾಹವನ್ನಾಗಿ ಆಚರಿಸಲಾಯಿತು, ಪ್ರತಿದಿನ ಬೆಳಗಿನ ಅವಧಿಯ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಗಣಿತಕ್ಕೆ ಸಂಬಂಧಿಸಿದ ಪದ್ಯಗಳ ಕಂಠಪಾಠ ಪ್ರದರ್ಶನ, ಗಣಿತದ ಸುಭಾಷಿತಗಳ ವಾಚನ ಮತ್ತು ಗಣಿತಕ್ಕೆ ಸಂಬಂಧಿಸಿದ ಚಿಂತನೆಗಳ ವಾಚನವನ್ನು ವಾರಪೂರ್ತಿ ನಡೆಸಿಕೊಟ್ಟರು. ಹಾಗೆಯೇ ತರಗತಿ ಕೋಣೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿನ ಎಲ್ಲಾ ಸೂಚನಾ ಫಲಕಗಳನ್ನು ಗಣಿತದ ವಿಷಯಗಳಿಂದ ಅಲಂಕಾರಗೊಳಿಸಲಾಗಿತ್ತು.

ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲಾ ಸ್ಪರ್ಧಾವಿದ್ಯಾರ್ಥಿಗಳಿಗೆ ಶಾಲೆಯ ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಡಿ ಮ್ಯಾಥ್ಯು ಅವರು ಬಹುಮಾನ ವಿತರಿಸುವದರ ಮೂಲಕ ಪ್ರೋತ್ಸಾಹಿಸಿದರು.

ಸ್ಪರ್ಧಾ ಕಾರ್ಯಕ್ರಮವನ್ನು ಶಾಲೆಯ ಗಣಿತ ಶಿಕ್ಷಕ ಬಿ.ವಿ. ರಮೇಶ್ ಅವರು ತಮ್ಮ ಸಹೋದ್ಯೋಗಿಗಳ ಸಹಕಾರ ದೊಂದಿಗೆ ಆಯೋಜಿಸಿದ್ದರು. ಕಾರ್ಯಕ್ರಮ ವನ್ನು ಕೆಡೆಟ್ ಸುಜಿತ್ ಬೀರಾದಾರ್ ಮತ್ತು ಕೆಡೆಟ್ ವಿನಯ್ ನಿರ್ವಹಿಸಿದರು.