ಸೋಮವಾರಪೇಟೆ, ಡಿ. 23: ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಬೇಕಾದರೆ ಪೊರಕೆ ಹಿಡಿಯುವ ಕೈಗಳಿಗೆ ಶಕ್ತಿ ನೀಡಬೇಕು. ಸ್ವಚ್ಛ ಭಾರತದ ಸಂಕಲ್ಪ ಎಲ್ಲರಲ್ಲೂ ಮೂಡಬೇಕು ಎಂದು ರೋಟರಿ ಸಂಸ್ಥೆ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ ಹೇಳಿದರು.

ಇಲ್ಲಿನ ರೋಟರಿ ಸಂಸ್ಥೆಯ ವತಿಯಿಂದ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ, ಸಂಗ್ರಹಿಸಿದ ಕಸದ ರಾಶಿಗಳನ್ನು ವಿಂಗಡಿಸಿ, ವೈಜ್ಞಾನಿಕ ವಿಲೇವಾರಿ ಮಾಡಬೇಕು. ಹೊಸ ಹೊಸ ಆವಿಷ್ಕಾರದತ್ತ ಮುನ್ನಡೆಯಬೇಕು ಎಂದರು.

ಸಮಾಜದಲ್ಲಿ ಮಾನವೀಯತೆ ಮೇಲೆ ನಡೆಯುತ್ತಿರುವ ಕೌರ್ಯದ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಮನುಷ್ಯ ಮನುಷ್ಯನ ನಡುವೆ, ಬಾಂಧವ್ಯದ ಸಂಬಂಧಗಳು ಮರೆಯಾಗುತ್ತಿದೆ. ಪ್ರತಿಯೊಬ್ಬ ರೋಟರಿ ಸದಸ್ಯರು ಸೇವೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಅಧ್ಯಕ್ಷ ರಾಕೇಶ್ ಪಟೇಲ್ ಮಾತನಾಡಿ, ಭವಿಷ್ಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಯೋಜ ನವಾಗಬಹುದಾದ ಮತ್ತಷ್ಟು ಯೋಜನೆಗಳನ್ನು ಜಾಗತಿಕ ರೋಟರಿ ಕ್ಲಬ್ ಸಹಯೋಗದಲ್ಲಿ ಮಾಡ ಲಾಗುವದು ಎಂದರು.

ಸಹಾಯಕ ರಾಜ್ಯಪಾಲ ಮಹೇಶ್ ನಲ್ವಾಡೆ ಮಾತನಾಡಿ, ಕೊಡಗು ಜಿಲ್ಲೆಯ 99 ಶಾಲೆಗಳ 15,600 ವಿದ್ಯಾರ್ಥಿಗಳ ಬಳಕೆಗಾಗಿ ವೈಜ್ಞಾನಿಕ ಶಿಕ್ಷಣದ ಮಾಹಿತಿ ನೀಡುವ ವಿಜ್ಞಾನ ವಾಹಿನಿ ಹೆಸರಿನ ಮೂರು ವಾಹನಗಳು ಜಿಲ್ಲೆಯಲ್ಲಿ ಸಂಚರಿಸುತ್ತವೆ ಎಂದರು.

ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ವಿದ್ಯಾರ್ಥಿಗಳ ಬಳಕೆಗಾಗಿ ಈ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದ್ದು, ವಿದ್ಯಾರ್ಥಿಗಳಲ್ಲಿ ಅತ್ಯಾಧುನಿಕ ವಿಜ್ಞಾನದ ವಿಚಾರಗಳು ಮತ್ತು ವೈಜ್ಞಾನಿಕ ಜ್ಞಾನದ ವಿನಿಮಯಕ್ಕೆ ಇದು ಸಹಕಾರಿಯಾಗಲಿದೆ ಎಂದರು.

ವೇದಿಕೆಯಲ್ಲಿ ಕಾರ್ಯದರ್ಶಿ ಎಂ.ಎಂ. ಪ್ರಕಾಶ್, ವಲಯ ಸೇನಾನಿ ಮೋಹನ್‍ರಾಂ, ನಿಯೋಜಿತ ಅಧ್ಯಕ್ಷ ಪಿ.ಕೆ. ರವಿ, ಧಮಯಂತಿ ಚಂಗಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭ ನೂತನ ಸದಸ್ಯರಿಗೆ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದರು.