ಪೆÇನ್ನಂಪೇಟೆ, ಡಿ. 23: ಕಂಡಂಗಾಲದ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ (ಯು.ಎಸ್.ಸಿ) ಬೇರಳಿನಾಡ್ ಸಂಸ್ಥೆಯ ವತಿಯಿಂದ ಹಾಕಿ ಕೂರ್ಗ ಸಹಯೋಗದಲ್ಲಿ ಕಂಡಂಗಾಲದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚಂದೂರ ಕಮಲ ಸ್ಮಾರಕ 5ನೇ ವರ್ಷದ ಆಹ್ವಾನಿತ ತಂಡಗಳ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ‘ಲೋಟಸ್ ಕಪ್- 2017’ರ 2ನೇ ದಿನದ ಪಂದ್ಯದಲ್ಲಿ 4 ತಂಡಗಳು ಮುನ್ನಡೆ ಸಾಧಿಸಿ ಸೆಮಿ ಫೈನಲ್ಸ್ ಪ್ರವೇಶಿಸಿದೆ. ಕೋಣನಕಟ್ಟೆಯ ಕೋಣನಕಟ್ಟೆ ಇಲೆವೆನ್ಸ್, ಮೂರ್ನಾಡಿನ ಎಂ.ಆರ್.ಎಫ್, ಬೇಗೂರಿನ ಇ.ವೈ.ಸಿ ಮತ್ತು ಕಾಕೋಟುಪರಂಬುವಿನ ಎಸ್.ಆರ್.ಸಿ ತಂಡಗಳು ಎದುರಾಳಿ ತಂಡಗಳನ್ನು ಮಣಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.

ಮೊದಲ ಪಂದ್ಯದಲ್ಲಿ ಕೋಣನಕಟ್ಟೆ ಇಲೆವೆನ್ಸ್ ತಂಡ ಯು.ಎಸ್.ಸಿ. ಬೇರಳಿನಾಡ್ (ಗ್ರೀನ್) ತಂಡವನ್ನು 4-1 ಗೋಲುಗಳಿಂದ ಸೊಲಿಸಿತು. ವಿಜೇತ ತಂಡದ ಪರ ಅತಿಥಿ ಆಟಗಾರ ಕುಲ್‍ದೀಪ್ 11ನೇ ನಿಮಿಷದಲ್ಲಿ, ಅಚ್ಚಪ್ಪ 16ನೇ ನಿಮಿಷದಲ್ಲಿ, ಯಶ್ವಿನ್ 18ನೇ ನಿಮಿಷದಲ್ಲಿ ಮತ್ತು ಅತಿಥಿ ಆಟಗಾರ ಭರತ್ 47ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಪರಾಜಿತ ತಂಡ ಪರ ಭರತ್ 29ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

2ನೇ ಪಂದ್ಯದಲ್ಲಿ ಮೂರ್ನಾಡಿನ ಎಂ.ಆರ್.ಎಫ್ ತಂಡ ಗೋಣಿಕೊಪ್ಪಲುವಿನ ಬಿ.ಬಿ.ಸಿ. ತಂಡವನ್ನು 6-1 ಗೋಲುಗಳಿಂದ ಸೋಲಿಸಿತು. ಅತಿಥಿ ಆಟಗಾರ ಶೇಷಗೌಡ 5ನೇ, 22ನೇ ಮತ್ತು 23ನೇ ನಿಮಿಷದಲ್ಲಿ, ಕಾರಲ್ ಕಾರ್ಯಪ್ಪ 14ನೇ ನಿಮಿಷದಲ್ಲಿ, ಜೀವನ್ 47ನೇ ನಿಮಿಷದಲ್ಲಿ ಹಾಗೂ ಅತಿಥಿ ಆಟಗಾರ ಪೂಣಚ್ಚ 48ನೇ ನಿಮಿಷದಲ್ಲಿ ವಿಜೇತ ತಂಡದ ಪರ ಗೋಲು ದಾಖಲಿಸಿದರೆ, ಬಿ.ಬಿ.ಸಿ. ತಂಡದ ಪರ ವಿಘ್ನೇಶ್ 43ನೇ ನಿಮಿಷದಲ್ಲಿ ಗೋಲು ಬಾರಿಸಿದರು.

3ನೇ ಪಂದ್ಯದಲ್ಲಿ ಬೇಗೂರಿನ ಇ.ವೈ.ಸಿ. ತಂಡವು, ಕುತ್ತುನಾಡಿನ ಯು.ಎಸ್.ಸಿ. ಬೇರಳಿನಾಡ್ (ರೆಡ್) ತಂಡವನ್ನು 2-1 ಗೋಲುಗಳಿಂದ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿತು. ಇ.ವೈ.ಸಿ. ತಂಡದ ಪರ ದೀಪಕ್ 10ನೇ ನಿಮಿಷದಲ್ಲಿ ಮತ್ತು ಅತಿಥಿ ಆಟಗಾರ ಸೋನು 27ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಪರಾಜಿತ ತಂಡದ ಪರ ಅತಿಥಿ ಆಟಗಾರ ಚಿಂಗಪ್ಪ 25ನೇ ನಿಮಿಷದಲ್ಲಿ ಗೋಲು ಹೊಡೆದರು.

ದಿನದ ಕೊನೆಯ ಪಂದ್ಯದಲ್ಲಿ ಎಸ್.ಆರ್.ಸಿ. ಕಾಕೋಟುಪರಂಬು ತಂಡವು ಡ್ರಿಬಲರ್ಸ್ ಹ್ಯಾಂಪ್ ತಂಡವನ್ನು 4-3 ಗೋಲುಗಳಿಂದ ಶೂಟೌಟ್‍ನಲ್ಲಿ ಸೋಲಿಸಿ ಸೆಮಿ ಫೈನಲ್ಸ್ ಪಂದ್ಯಾವಾಡಲು ಅರ್ಹತೆ ಪಡೆಯಿತು. ಪೆನಾಲ್ಟಿ ಕಾರ್ನರ್ ಸಹಾಯದಿಂದ ಮೊದಲು ಗೋಲು ಬಾರಿಸಿದ ಡ್ರಿಬಲರ್ಸ್ ಹ್ಯಾಂಪ್ ತಂಡದ ಚೇತು 36ನೇ ನಿಮಿಷದಲ್ಲಿ ತಂಡದ ಖಾತೆ ತೆರೆದರೆ, ವಿಜೇತ ತಂಡದ ಪರ ರಿಂಕಿ ಪೂವಣ್ಣ 59ನೇ ನಿಮಿಷದಲ್ಲಿ ಫೀಲ್ಡ್ ಗೋಲ್ ಬಾರಿಸಿ ಅಂತರ ಸಮನಾಗಿಸಿದರು. ಇದರಿಂದ ಶೂಟೌಟ್ ಅಳವಡಿಸಿದಾಗ ಎಸ್.ಆರ್.ಸಿ. ತಂಡದ ಪರ ಭರತ್, ದೀರಜ್ ಮುತ್ತಣ್ಣ ಮತ್ತು ಬೆಳ್ಯಪ್ಪ ತಲಾ ಒಂದು ಗೋಲು ಹೊಡೆದರೆ, ಪರಾಜಿತ ತಂಡದ ಪರ ರೀತು ಮತ್ತು ಶ್ರೇಯಸ್ಸ್ ತಲಾ ಒಂದು ಗೋಲು ದಾಖಲಿಸಿದರು.