ಸೋಮವಾರಪೇಟೆ, ಡಿ. 24: ಅನ್ನ ಬೆಳೆಯುವ ಭೂಮಿಯನ್ನು ಮಾರಾಟ ಮಾಡಿ ದಿವಾಳಿಯಾಗದಿರಿ. ಇರುವ ಭೂಮಿಯನ್ನು ಮಾರಿ ಪಟ್ಟಣ ಸೇರಿದರೆ ಮುಂದೊಂದು ದಿನ ಇನ್ನಿಲ್ಲದ ಸಂಕಷ್ಟ ಎದುರಿಸ ಬೇಕಾಗುತ್ತದೆ ಎಂದು ರೈತರಿಗೆ ಕಿವಿಮಾತು ಹೇಳಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ರೈತರು ಮತ್ತು ಬೆಳೆಗಾರರ ಸಮಸ್ಯೆ ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ತಾನು ಪ್ರಯತ್ನಿಸುವದಾಗಿ ಭರವಸೆ ನೀಡಿದರು.

ಗೌಡಳ್ಳಿ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್, ಗೌಡಳ್ಳಿ ಬಿಜಿಎಸ್ ಆಂಗ್ಲಮಾಧ್ಯಮ ಶಾಲೆ ಹಾಗೂ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಬಿಜಿಎಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಭೂಮಿ ಮಾರಿ ಪಟ್ಟಣ ಸೇರಿರುವವರು ಮುಂದಿನ ದಿನಗಳಲ್ಲಿ ಇಲ್ಲಿಗೇ ವಾಪಸ್ ಬರಲಿದ್ದಾರೆ. ಅಕ್ಷಯ ಪಾತ್ರೆಯಂತಿರುವ ಕೃಷಿ ಭೂಮಿ ಮಾರಾ ಟಕ್ಕೆ ಯಾರೂ ಮನಸ್ಸು ಮಾಡ ಬಾರದು. ಕೃಷಿ ದೇಶದ ಜೀವನಾಡಿ ಯಾಗಿದ್ದು, ದೇಶದ ಬೆನ್ನೆಲುಬಾಗಿರುವ ಅನ್ನದಾತ ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಪ್ರಥಮ ಆದ್ಯತೆ ನೀಡಬೇಕು ಎಂದು ಅಭಿಪ್ರಾ ಯಿಸಿದರು. ಮುಖ್ಯ ಭಾಷಣ ಕಾರರಾಗಿದ್ದ ಶನಿವಾರಸಂತೆಯ ಉಪನ್ಯಾಸಕ ಸೋಮಶೇಖರ್ ಮಾತನಾಡಿ, ಅನ್ನದಾತ ರೈತರು ದಂಗೆ ಎದ್ದರೆ ದೇಶ ದಿವಾಳಿಯಾಗುತ್ತದೆ. ಈ ಸತ್ಯ ಸರ್ಕಾರಗಳಿಗೆ ತಿಳಿದಿದ್ದರೂ ಸಹ ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗದಿರುವದು ದುರಂತ. ರೈತ ಯೋಗಿಯಾಗಿಲ್ಲ, ಭಿಕ್ಷೆ ಬೇಡುವ ಜೋಗಿಯಾಗಿದ್ದಾನೆ ಎಂದು ವಿಷಾದಿಸಿದರು.

ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವದೇ ರೈತಪರ ಯೋಜನೆಗಳು ಕಾರ್ಯಗತವಾಗುತ್ತಿಲ್ಲ. ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ಮೂರನೇ ಸ್ಥಾನ ಪಡೆದಿದೆ. ಈ ಪರಿಸ್ಥಿತಿ ಬದಲಾಗಿ ಅನ್ನದಾತನ ಬದುಕು ಹಸನಾಗಬೇಕು ಎಂದು ಹೇಳಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಮಾತನಾಡಿ, ಸುಧಾರಿತ ಬೇಸಾಯದಿಂದ ಉತ್ತಮ ಇಳುವರಿ ಪಡೆಯಬಹುದು. ತಾಂತ್ರಿಕತೆ ಅಳವಡಿಸಿಕೊಂಡು ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಅಧಿಕ ಆದಾಯ ಪಡೆಯುವ ಕೃಷಿ ಚಟುವಟಿಕೆಯತ್ತ ರೈತರು ಮುಂದಾಗಬೇಕೆಂದರು.

ಮಣ್ಣಿನ ಆರೋಗ್ಯ ಕಾಪಾಡಿದರೆ, ಆರೋಗ್ಯಕರ ಬೆಳೆ ತೆಗೆಯಬಹುದು. ಮಣ್ಣು ಆರೋಗ್ಯ ಪರೀಕ್ಷೆಯಿಂದ ಮಣ್ಣಿಗೆ ಬೇಕಾದ ಪೋಷಕಾಂಶಗಳನ್ನು ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ರೈತರು ಮಣ್ಣು ಪರೀಕ್ಷೆ ಮಾಡಿಸಬೇಕು. ಮಣ್ಣು ಆರೋಗ್ಯ ಚೀಟಿ ಕಡ್ಡಾಯವಾಗಿದ್ದು, ಆಧಾರ್ ಕಾರ್ಡ್‍ನೊಂದಿಗೆ ಜೋಡಣೆ ಮಾಡಲಾಗುತ್ತಿದೆ. ಅವಶ್ಯಕ ಇದ್ದಷ್ಟೇ ಗೊಬ್ಬರ ಹಾಕಬೇಕಾದ ಪದ್ಧತಿ ಬರಲಿದೆ ಎಂದರು.

ವೇದಿಕೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್, ಜಿ.ಪಂ ಸದಸ್ಯ ಬಿ.ಜೆ. ದೀಪಕ್, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಕೃಷಿಕರ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್, ಶನಿವಾರಸಂತೆ ಸಂಘದ ಅಧ್ಯಕ್ಷ ಶರತ್‍ಶೇಖರ್, ಕೊಡ್ಲಿಪೇಟೆ ಸಂಘದ ಅಧ್ಯಕ್ಷ ಎಸ್.ಡಿ. ತಮ್ಮಯ್ಯ, ರೈತ ಹೋರಾಟ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ. ದಿವಾಕರ್, ಗೌಡಳ್ಳಿ ಸಂಘದ ಉಪಾಧ್ಯಕ್ಷ ಎಚ್.ಆರ್. ಸುರೇಶ್, ಬೀಟಿಕಟ್ಟೆ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಎಸ್.ಬಿ. ಜಯಂತ್, ಗೌಡಳ್ಳಿ ಕಾವೇರಿ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಸುರೇಶ್, ಬಿಜಿಎಸ್ ಶಾಲೆಯ ಕಾರ್ಯದರ್ಶಿ ವಿ.ಎನ್. ನಾಗರಾಜ್, ಮುಖ್ಯ ಶಿಕ್ಷಕ ಗಣೇಶ್ ಇದ್ದರು.

ಕಾರ್ಯಕ್ರಮದಲ್ಲಿ ತೋಟ ಗಾರಿಕಾ ಇಲಾಖೆಯ ಅಧಿಕಾರಿ ರಮೇಶ್ ಹಿಪ್ಪಿಕೊಪ್ಪ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿ ಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕಿ ಪುಷ್ಪಾ ಕಾರ್ಯಕ್ರಮ ನಿರ್ವಹಿಸಿದರು.