ಗೋಣಿಕೊಪ್ಪ ವರದಿ, ಜ. 11: ಶಿಕ್ಷಣ ಪಡೆಯುತ್ತಿರುವ ಶಾಲೆಯಿಂದ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವದಿಲ್ಲ. ಸಾಧಿಸುವ ಛಲ ಹಾಗೂ ಆತ್ಮಸ್ಥೈರ್ಯದಿಂದ ಗುರಿಯನ್ನು ಸುಲಭವಾಗಿ ಮುಟ್ಟಬಹುದು ಎಂದು ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.

ಹಾತೂರು ಪ್ರೌಢಶಾಲೆ ವತಿಯಿಂದ ಅಲ್ಲಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಯಸ್ಸು ಸಾಧನೆಯನ್ನು ನಿಯಂತ್ರಿಸುವದಿಲ್ಲ. ದೃಢ ನಿರ್ಧಾರ ವಯಸ್ಸಿನ ಎಲ್ಲೆಗಳನ್ನು ಮೀರಿ ಸಾಧನೆಯ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.

ವಿದೇಶದಲ್ಲಿ ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯುವ ಅವಕಾಶ ಕ್ರೀಡಾಪಟುಗಳಿಗೆ ಹಾಗೂ ಸೈನಿಕ ರಿಗೆ ಮಾತ್ರ ಸಾಧ್ಯವಿದೆ. ಶಿಕ್ಷ ಕರು ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ನೀಡಿದರೆ ಉತ್ತಮ ಕ್ರೀಡಾ ಪಟುಗಳನ್ನು ಬೆಳಕಿಗೆ ತರಲು ವೇದಿಕೆಯಾಗುತ್ತದೆ. ಪಾಕಿಸ್ತಾನದಲ್ಲಿ ನಡೆದ ಸೌಥ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 200 ಮೀ ಓಟದಲ್ಲಿ ಚಿನ್ನದ ಪದಕ ಪಡೆಯಲು ಗಟ್ಟಿಯಾದ ಆತ್ಮಸ್ಥೈರ್ಯ ಮುಖ್ಯ ಪಾತ್ರ ವಹಿಸಿತು. ಇದರಿಂದ ಅಲ್ಲಿ ದೇಶದ ಧ್ವಜ ಹಾರಿಸಲು ಸಹಕಾರಿ ಆಯಿತು ಎಂದರು.

ಮೇಜರ್ ಜನರಲ್ (ನಿ) ಕುಪ್ಪಂಡ ಪಿ. ನಂಜಪ್ಪ ಮಾತನಾಡಿ, ಸೇನೆಗೆ ಸೇರಲು ಬಯಸುವ ವಿದ್ಯಾರ್ಥಿಗಳು ಶೀಘ್ರವಾಗಿ ನಿರ್ಧರಿಸಿದರೆ ಪ್ರವೇಶ ಪರೀಕ್ಷೆಗಳಲ್ಲಿ ಸುಲಭವಾಗಿ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ. ಸಾಹಸಮಯ ವೃತ್ತಿ ಬೇಕೆಂದರೆ ಸೈನ್ಯಕ್ಕೆ ಸೇರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಒಲಿಂಪಿಯನ್ ವಿ. ರಘುನಾಥ್ ಮಾತನಾಡಿ, ಹಲವಾರು ಪ್ರಶಸ್ತಿಗಳು ಸ್ವೀಕರಿಸಿದರೂ ಸಿಗದ ಸಂತೋಷ ಸ್ವಗ್ರಾಮದಲ್ಲಿ ಸ್ವೀಕರಿಸಿದ ಸನ್ಮಾನ ತಂದುಕೊಟ್ಟಿದೆ.

ಸಾಧನೆಗೆ ಕೊನೆಯಿಲ್ಲ. ಯಾವದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ನಂತರ ಕಲಿಕೆಗೆ ಕೊನೆಯಿಲ್ಲ ಕಲಿಕೆ ನಿರಂತರ ಎಂದು ಹೇಳಿದರು. ಈ ಸಂದರ್ಭ ಒಕ್ಕಲಿಗರ ರಘುನಾಥ್, ಅಂತರರಾಷ್ಟ್ರೀಯ ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ ಅವರನ್ನು ಸನ್ಮಾನಿಸಲಾಯಿತು.

ಹಾತೂರು ಪ್ರೌಢಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಸ್ಥಳೀಯ ದಾನಿಗಳಾದ ಕೇಳಪಂಡ ಉತ್ತಯ್ಯ, ಪಟ್ರಂಗಡ ಅಯ್ಯಪ್ಪ, ಕೊಡಂದೇರ ಅಯ್ಯಪ್ಪ, ತೀತಮಾಡ ಸುಬ್ಬಯ್ಯ, ದೊಡ್ಡಮನೆ ಚಂದ್ರಶೇಖರ್, ಮುರುವಂಡ ಮಂದಣ್ಣ, ಕೊಡಂದೇರ ಕುಶಾಲಪ್ಪ, ಕೊಕ್ಕಂಡ ಕಾಳಪ್ಪ, ಚೇಂದಂಡ ಉತ್ತಯ್ಯ ಹಾಗೂ ಹೆಚ್.ಎಸ್. ಶಶಿಧರ್ ಅವರುಗಳನ್ನು ಗೌರವಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೊಡ್ಡಮನೆ ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಶಿಕ್ಷಣಾಧಿಕಾರಿ ಲೋಕೇಶ್ ಹಾಗೂ ಇತರರು ಉಪಸ್ಥಿತರಿದ್ದರು.