ಮಡಿಕೇರಿ, ಜ. 11: ತಾ. 28 ರಂದು ಪ್ರಥಮ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಶೇಕಡವಾರು ಯಶಸ್ಸಿಗೆ ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಕೋರಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋವನ್ನು ಕಡ್ಡಾಯವಾಗಿ ಹಾಕಬೇಕು, ಜಿಲ್ಲೆಯಿಂದ ಹೊರ ಹೋಗುವ ಹಾಗೂ ಬರುವ ವಲಸೆ ಮಕ್ಕಳು, ಜೊತೆಗೆ ಕಳೆದ ಬಾರಿ ಪಲ್ಸ್ ಪೋಲಿಯೋದಿಂದ ಹೊರಗುಳಿದ ಮಕ್ಕಳನ್ನು ಗುರ್ತಿಸಿ ಪಲ್ಸ್ ಪೋಲಿಯೋ ಹನಿ ಹಾಕಬೇಕು. ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ತಂಡ ರಚಿಸಿ ಪಲ್ಸ್ ಪೋಲಿಯೋ ಹನಿ ಹಾಕುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅವರು ಸಲಹೆ ಮಾಡಿದರು.

ಜಿಲ್ಲೆಯ ವಿವಿಧ ಹಾಡಿಗಳು, ಲೈನ್‍ಮನೆಗಳು ಹಾಗೂ ಇತರ ಪ್ರದೇಶಗಳಿಗೆ ತೆರಳಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಒಟ್ಟು 5,72,812 ಜನಸಂಖ್ಯೆ ಇದ್ದು, ಇವರಲ್ಲಿ 55,951 ಮಂದಿ ನಗರ/ಪಟ್ಟಣ ಪ್ರದೇಶದಲ್ಲಿ ಮತ್ತು 5,16,861 ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆ ಇದ್ದಾರೆ. ಇವರಲ್ಲಿ 5 ವರ್ಷದೊಳಗಿನ 40,627 ಮಕ್ಕಳು ಜಿಲ್ಲೆಯಲ್ಲಿದ್ದು, ಇವರಲ್ಲಿ 4,656 ನಗರ ಮತ್ತು 35,971 ಗ್ರಾಮೀಣ ಪ್ರದೇಶದ ಮಕ್ಕಳಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ 1,99,212 ವಲಸಿಗ ಜನಸಂಖ್ಯೆ ಇದ್ದು, ಇವರಲ್ಲಿ 15,394 ಐದು ವರ್ಷದೊಳಗಿನ ಮಕ್ಕಳು ಇದ್ದಾರೆ, ಒಟ್ಟಾರೆ ಜಿಲ್ಲೆಯಲ್ಲಿ 1,33,356 ಕುಟುಂಬಗಳಿವೆ ಎಂದು ಮಾಹಿತಿ ನೀಡಿದರು.

ಪ್ರಥಮ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಒಟ್ಟು 470 ಬೂತ್‍ಗಳನ್ನು ತೆರೆಯಲಾಗಿದೆ. ಅಲ್ಲದೆ 20 ಟ್ರಾನ್ಸಿಸ್ಟ್ ತಂಡಗಳು, 6 ಸಂಚಾರಿ ಲಸಿಕಾ ತಂಡಗಳನ್ನು ವ್ಯವಸ್ಥೆ ಮಾಡಲಾಗಿದೆ. 1,932 ಮಂದಿ ಲಸಿಕೆ ಹಾಕುವವರು, 87 ಮಂದಿ ಮೇಲ್ವಿಚಾರಕರು, 966 ಮನೆ ಮನೆಗೆ ಭೇಟಿ ನೀಡುವ ತಂಡವನ್ನು ರಚಿಸಲಾಗಿದೆ ಎಂದು ಡಾ. ರಾಜೇಶ್ ಹೇಳಿದರು.

ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ, ಚೇರಂಬಾಣೆ, ಸಂಪಾಜೆ, ಮಡಿಕೇರಿ ನಗರದ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತ, ರಾಜಾಸೀಟು, ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣ, ಕುಶಾಲನಗರದ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ನಿಸರ್ಗಧಾಮ, ಕೊಡ್ಲಿಪೇಟೆ ಬಸ್ ನಿಲ್ದಾಣ, ಶನಿವಾರಸಂತೆ ಬಸ್ ನಿಲ್ದಾಣ. ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪ ಬಸ್ ನಿಲ್ದಾಣ, ಮಾಕುಟ್ಟ, ಕುಟ್ಟ ಗೇಟ್, ತಿತಿಮತಿ ಆನೆ ಚೌಕೂರು ಗೇಟ್, ಮಾಲ್ದಾರೆ ಗೇಟ್, ಅಮ್ಮತ್ತಿ ಬಸ್ ನಿಲ್ದಾಣ, ಸಿದ್ದಾಪುರ ಬಸ್ ನಿಲ್ದಾಣಗಳಲ್ಲಿ ಟ್ರಾನ್ಸಿಸ್ಟ್ ತಂಡವನ್ನು ನಿಯೋಜಿಸ ಲಾಗುತ್ತದೆ ಎಂದು ಮಾಹಿತಿ ನೀಡಿದರು. ಆರ್‍ಸಿಎಚ್ ಅಧಿಕಾರಿ ಡಾ. ಎಂ.ಎನ್. ನಿಲೇಶ್ ಮಾತನಾಡಿದರು. ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಐಟಿಡಿಪಿ ಅಧಿಕಾರಿ ಪ್ರಕಾಶ್, ಪೌರಾಯುಕ್ತೆ ಬಿ. ಶುಭಾ, ವೈದ್ಯಕೀಯ ಕಾಲೇಜಿನ ಡಾ.ರಾಮಚಂದ್ರ ಕಾಮತ್, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜು, ಡಾ. ರವಿಕುಮಾರ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಹೆಚ್.ಟಿ. ಅನಿಲ್, ಸಮಿತಿ ನಿರ್ದೇಶಕ ಕುಲಕರ್ಣಿ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.