ಮಡಿಕೇರಿ, ಜ. 11: ಬಿಜೆಪಿ ಅವಧಿಯಲ್ಲಿ ಎಮ್ಮೆಮಾಡು ಅಭಿವೃದ್ಧಿಯಾಗಿದೆ ಎಂದು ಎಮ್ಮೆಮಾಡು ಗ್ರಾ.ಪಂ. ಅಧ್ಯಕ್ಷ ಎನ್.ಕೆ. ಆಲಿ ಹೇಳಿದ್ದಾರೆ. ಎಮ್ಮೆಮಾಡು ಗ್ರಾಮ ಪಂಚಾಯ್ತಿಯ ಪಡಿಯಾಣಿ ವಿಭಾಗದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎನ್ನುವ ಪಂಚಾಯ್ತಿ ಸದಸ್ಯ ಹಂಸ ಅವರ ಆರೋಪವನ್ನು ಅಧ್ಯಕ್ಷರು ಹಾಗೂ ಸದಸ್ಯರು ಅಲ್ಲಗಳೆದಿದ್ದು, ಅಧ್ಯಕ್ಷ ಸ್ಥಾನದ ಬದಲಾವಣೆ ಪಕ್ಷದ ಪ್ರಮುಖರಿಗೆ ಬಿಟ್ಟ ವಿಚಾರವೆಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎನ್.ಕೆ. ಆಲಿ ಮಾತನಾಡಿ, ಪಕ್ಷದ ಒಪ್ಪಂದದಂತೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಎರಡೂವರೆ ವರ್ಷಕ್ಕೆ ನಿಗದಿಯಾಗಿದ್ದರು, ಮಡಿಕೆÉೀರಿ ತಾಲೂಕು ಬಿಜೆಪಿ ಘಟಕದ ಸೂಚನೆಯಂತೆ ವಿಧಾನಸಭಾ ಚುನಾವಣೆ ಕಳೆದ ನಂತರ ಅಧ್ಯಕ್ಷ ಸ್ಥಾನ ಹಸ್ತಾಂತರಕ್ಕೆ ನಿರ್ಧರಿಸಲಾಗಿತ್ತು. ಆದರೆ ಇದೀಗ ಪಕ್ಷಕ್ಕೆ ಹಂಸ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ವಿಚಾರವನ್ನು ಪಕ್ಷದ ಪ್ರಮುಖರು ನಿರ್ಧರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಚೆಂಬಾರಂಡ ಮಾಯಿನೆ ಮಾತನಾಡಿ, ಎಮ್ಮೆಮಾಡಿನಲ್ಲಿ ಅಭಿವೃದ್ಧಿ ನಡೆದಿಲ್ಲ ಎನ್ನುವ ಹಂಸ ಅವರ ಆರೋಪ ಸತ್ಯಕ್ಕೆ ದೂರವಾದ ವಿಚಾರ. ನೂತನವಾದ ಪ್ರೌಢ ಶಾಲಾ ಮತ್ತು ಪ್ರಾಥಮಿಕ ಶಾಲಾ ಕಟ್ಟಡ, ಬೃಹತ್ ಕುಡಿಯುವ ನೀರಿನ ಯೋಜನೆ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 2.38 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಎಲ್ಲಾ ಸದಸ್ಯರ ಕ್ಷೇತ್ರದಲ್ಲಿ ಸಮನಾಗಿ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಎಮ್ಮೆಮಾಡಿಗೆ ಭೇಟಿ ನೀಡಿದ ಸಂದರ್ಭ ಪಂಚಾಯ್ತಿ ಅಭಿವೃದ್ಧಿಗೆ 4.50 ಕೋಟಿ ರೂ. ಅನುದಾನ ನೀಡುವದಾಗಿ ಭರವಸೆ ನೀಡಿದ್ದರು. ಆದರೆ ಈ ಹಣ ಬಿಡುಗಡೆಯಾಗಿಲ್ಲ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ತೊಡಕಾಗಿದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಸಿ.ಎಂ. ಹಂಸ, ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ಇ. ಹಸೈನಾರ್, ಬಿಜೆಪಿ ಕಾರ್ಯಕರ್ತರಾದ ಕೆ.ಪಿ. ಅಬ್ಬಾಸ್, ಸಿ.ಹೆಚ್. ಮೊಯ್ದು ಉಪಸ್ಥಿತರಿದ್ದರು.