ಕುಶಾಲನಗರ, ಜ. 11: ಹಾರಂಗಿ ಉದ್ಯಾನವನದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಾಣಗೊಂಡ ಸಂಗೀತ ಕಾರಂಜಿ ಲೋಕಾರ್ಪಣೆಗೊಂಡಿದೆ. ಪ್ರಸಕ್ತ ಸಂಜೆ 6.30 ರಿಂದ ಅರ್ಧ ಗಂಟೆಗಳ ಕಾಲ ಪ್ರವಾಸಿಗರಿಗೆ ಪ್ರದರ್ಶನವನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದು ಅಣೆಕಟ್ಟು ವಿಭಾಗದ ಉಸ್ತುವಾರಿ ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ಸುಮಾರು 2.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಂಗೀತ ಕಾರಂಜಿ ಮೈಸೂರು ಬೃಂದಾವನದಲ್ಲಿರುವ ಕಾರಂಜಿಗಿಂತ ದೊಡ್ಡದಾಗಿದ್ದು ಏಕಕಾಲದಲ್ಲಿ 300 ಮಂದಿ ವೀಕ್ಷಿಸಬಹುದಾಗಿದೆ. ಪ್ರಸಕ್ತ 8 ಹಾಡುಗಳನ್ನು ಈ ಕಾರಂಜಿಗೆ ಅಳವಡಿಸಲಾಗಿದ್ದು ಯಶಸ್ವಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತಲಾ 5 ಹಾಡುಗಳೊಂದಿಗೆ ಎರಡು ಬಾರಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದಿರುವ ನಾಗರಾಜ್ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಕಾರಂಜಿ ವೀಕ್ಷಣೆಗೆ ಶುಲ್ಕ ನಿಗದಿ ಮಾಡಲಾಗುವದು ಎಂದು ತಿಳಿಸಿದ್ದಾರೆ.