ವೀರಾಜಪೇಟೆ, ಜ. 12: ಅಂದು ಯಾವ ಸೌಕರ್ಯವಿಲ್ಲದ ಕಾಲಘಟ್ಟದಲ್ಲಿ, ಬರವಣಿಗೆ ಇಲ್ಲ ಎಂಬ ಕಾಲದಲ್ಲಿ ಹರದಾಸ ಅಪ್ಪಚ್ಚ ಕವಿ ನಾಲ್ಕು ನಾಟಕಗಳನ್ನು ಸೃಷ್ಟಿಸಿದ ರೀತಿ ಅದ್ಬುತವಾಗಿದೆ. ಇದು ಅವರ ಸ್ವಾನುಭವದ ರಚನೆಯಾಗಿದ್ದು ಈ ರೀತಿ ಸಾಹಿತ್ಯ ಎಲ್ಲರಿಗೂ ಅಸಾಧ್ಯ. ಈ ಸಾಹಿತ್ಯ ಸಂಸ್ಕಾರವನ್ನು ಪರಕಾಯ ಪ್ರವೇಶ ಎನ್ನಬಹುದು ಎಂದು ಪೂಮಾಲೆ ಕೊಡವ ವಾರಪತ್ರಿಕೆಯ ಸಂಪಾದಕ ಮಹೇಶ್ ನಾಚಯ್ಯ ಅಭಿಪ್ರಾಯ ವ್ಯಕ್ತ ಪಡಿಸಿದರು. ಇಲ್ಲಿನ ವಿದ್ಯಾನಗರದ ಪ್ರಗತಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150 ನೇ ಜನ್ಮ ದಿನಾಚರಣೆ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು.
1868 ರಲ್ಲಿ ಜನಿಸಿದ ಕವಿ ಅಂದಿನ ಕಾಲದಲ್ಲಿ ಯಾವದೇ ವ್ಯವಸ್ಥೆಗಳು ಇಲ್ಲದೆ ಹೋದರೂ ಲೇಖನಿ ಹಿಡಿದು ಉತ್ತಮ ಸಾಹಿತ್ಯ ರಚನೆ ಮಾಡಿರುವದು ಆ ಕವಿಯ ಹೆಗ್ಗಳಿಕೆ. ಆದರೆ ಅಂತ ಕವಿಯ ಬಗ್ಗೆ ಇಂದಿನ ಜನಾಂಗಕ್ಕೆ ಅರಿವು ಮೂಡಿಸದೆ ಇಷ್ಟು ದಿನ ಕಳೆದಿರುವದು ನಮ್ಮೆಲ್ಲರ ತಪ್ಪು. ಚಿಂತನೆ ಇರುವಲ್ಲಿ ಈ ರೀತಿಯ ಸಾಹಿತ್ಯ ಸೃಷ್ಟಿ ಸಾಧ್ಯ, ಆದರೂ ಅದರ ಜೊತೆಗೆ ಈ ಮಣ್ಣಿನ ಶಕ್ತಿಯು ಅವರಿಗೆ ಪ್ರೇರಣೆ ನೀಡಿದೆ. ಕಲೆ ಸಂಸ್ಕøತಿಗೆ ವಿರುದ್ಧವಾಗಿ ನಿಂತರೆ ಅದು ಅದರ ಹಿನ್ನಡೆಗೆ ಕಾರಣ ವಾಗುತ್ತದೆ. ಅದರ ಒಳ್ಳೆತನವನ್ನು ಪ್ರಶಂಸಿಸಿ ನಮ್ಮಲ್ಲಿ ಅದನ್ನು ಅಳವಡಿಸಿಕೊಳ್ಳುವ ಪ್ರವೃತ್ತಿ ಇರಬೇಕು, ಇದಕ್ಕೆ ಜಾತಿ, ಧರ್ಮ ಕಟ್ಟುಪಾಡುಗಳು ಸಲ್ಲದು ಎಂದು ಮಹೇಶ್ ನಾಚಯ್ಯ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಸ್ಥ ಮಾದಂಡ ಪೂವಯ್ಯ ಮಾತನಾಡಿ, ಕೊಡಗಿನ ವಿರಳವಾದ ಸಾಹಿತಿಗಳಲ್ಲಿ ಅಮರವಾಗಿ ಉಳಿದವರು ಅಪ್ಪಚ್ಚಕವಿ. ರಾಜ್ಯದಲ್ಲಿಯೇ ಕವಿಗಳ ಪ್ರತಿಮೆ ವಿರಳ ಆದರೆ ವೀರಾಜಪೇಟೆಯ ಪ್ರಮುಖ ಸ್ಥಳದಲ್ಲಿ ಈ ಕವಿಯ ಪ್ರತಿಮೆ ಇರುವದು ಹೆಗ್ಗಳಿಕೆಯಾಗಿದೆ. ವೀರಪರಂಪರೆಯ ನಾಡು, ಕ್ರೀಡಾಳುಗಳ ನಾಡು ನಮ್ಮದು, ಅದೇ ರೀತಿ ಸಾಹಿತ್ಯದಲ್ಲಿ ಅಪ್ಪಚ್ಚ ಕವಿಯನ್ನು ಎಲ್ಲರೂ ನೆನೆಸುತ್ತಾರೆ. ಕೊಡವ ಕವಿಯಾದರೂ ಕನ್ನಡ ಭಾಷೆಯ ಪ್ರಭಾವವನ್ನು ಕಾಣಬಹುದು. ವಿದ್ಯಾರ್ಥಿಗಳು ಸಹ ಕನ್ನಡ, ಆಂಗ್ಲ ಸೇರಿದಂತೆ ವಿವಿಧ ಭಾಷೆಯನ್ನು ಕಲಿಯಬೇಕು, ಈ ಮೂಲಕ ಉತ್ತಮ ಸಾಹಿತ್ಯವನ್ನು ತರ್ಜಿಮೆ ಮಾಡುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭ ಅಲ್ಲಾರಂಡ ವಿಠಲ ನಂಜಪ್ಪ ನಿರ್ದೇಶನದ ಅಪ್ಪಚ್ಚ ಕವಿ ಬದುಕು ಬವಣೆ ಕುರಿತ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಬಳಿಕ ಈ ಸಾಕ್ಷ್ಯ ಚಿತ್ರದ ಕುರಿತು ರಂಗಕರ್ಮಿ ಮಾದೇಟೀರ ಬೆಳ್ಯಪ್ಪ ವಿಶ್ಲೇಷಣೆ ನೀಡಿದರು.
ಸಮಾರಂಭದಲ್ಲಿ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಮಾತನಾಡಿದರು. ಕೊಡವ ಸಮಾಜ ಆಡಳಿತ ಮಂಡಳಿಯ ಸದಸ್ಯ ಕೊಂಗಾಂಡ ನಾಣಯ್ಯ, ಶಾಲಾ ಮುಖ್ಯೋಪಾಧ್ಯಾಯಿನಿ ತುಂಗಾ ಪೂವಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಅಮ್ಮುಣಿಚಂಡ ಈಶ್ವರಿ ಮತ್ತಿತರರು ಉಪಸ್ಥಿತರಿದ್ದರು.