ಮಡಿಕೇರಿ, ಜ. 12: ಜಿಲ್ಲಾಡಳಿತ ವತಿಯಿಂದ ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ತಾ. 26 ರಂದು ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ, ಎಲ್ಲಾ ಇಲಾಖಾ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳು ಕೈಜೋಡಿಸಿ ಗಣರಾಜ್ಯೋತ್ಸವ ಯಶಸ್ವಿಗೆ ಸಹಕರಿಸುವಂತೆ ಕೋರಿದರು.
ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಳೆದ ಬಾರಿಯಂತೆ ಅರ್ಥಪೂರ್ಣವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು.
ಬೆಳಗಿನ ಹಾಗೂ ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು. ತಾ. 26 ರಂದು ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಂಗಡಿ ವಾಣಿಜ್ಯ ಸಂಕೀರ್ಣಗಳಲ್ಲಿ ಅಲಂಕಾರ ಮಾಡುವಂತೆ ಸಲಹೆ ಮಾಡಲಾಯಿತು.
ಗಣರಾಜ್ಯೋತ್ಸವ ಆಚರಣೆಗೆ ವಿವಿಧ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
ಉಪ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಐತಿಹಾಸಿಕ ಸಂದೇಶವನ್ನು ಒಳಗೊಂಡ ಸ್ತಬ್ಧಚಿತ್ರಗಳನ್ನು ನಿರ್ಮಾಣ ಮಾಡುವಂತೆ ಎಲ್ಲಾ ಅಭಿವೃದ್ಧಿ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಯಾರು ಸಹ ಗೈರು ಆಗಬಾರದು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ನಿರ್ದೇಶನ ನೀಡಿದರು. ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು. ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ಉತ್ತಮ ರೀತಿಯಲ್ಲಿ ಆಯೋಜಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಂದು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತೊಡಗಿಸಿಕೊಳ್ಳಬೇಕಿದೆ ಎಂದು ಸಲಹೆ ಮಾಡಿದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‍ರಾಜ್, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ, ಜಿ.ಪಂ. ಇಂಜಿನಿಯರ್ ರಾಜಕುಮಾರ ರೆಡ್ಡಿ, ಲೋಕೋಪಯೋಗಿ ಇಂಜಿನಿಯರ್ ಪ್ರಭು, ಪೌರಾಯುಕ್ತೆ ಬಿ. ಶುಭ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್, ಕಾರ್ಮಿಕ ಇಲಾಖೆ ಅಧಿಕಾರಿ ರಾಮಕೃಷ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ಸ್ಕೌಟ್ಸ್ ಮತ್ತು ಗೈಡ್ಸ್‍ನ ದಮಯಂತಿ, ಶಿರಸ್ತೆದಾರ್ ಅರುಣ್ ಸಾಗರ್, ಅನಿಲ್ ಕುಮಾರ್ ಇತರರು ಇದ್ದರು.