*ಗೋಣಿಕೊಪ್ಪ, ಜ. 12: ಮೈಸೂರಿನ ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಕಾನೂರು, ಬಲ್ಯಮಂಡೂರು ಗ್ರಾ.ಪಂ. ವ್ಯಾಪ್ತಿಯ ಪರಿಶಿಷ್ಟ ವರ್ಗ ಮತ್ತು ಪಂಗಡದವರಿಗೆ ರೋಗ ನಿರೋಧಕ ಔಷಧ ಮತ್ತು ರಾಸಾಯನಗಳ ಕಿಟ್‍ಗಳನ್ನು ವಿತರಿಸಲಾಯಿತು.

ಕಾನೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಆಯುರ್ವೇದ ಆರೋಗ್ಯ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಫಲಾನುಭವಿಗಳು ಸುಮಾರು 18ಕ್ಕೂ ಹೆಚ್ಚು ಔಷಧಿ ಪರಿಕರಗಳನ್ನು ಪಡೆದುಕೊಂಡರು.

ಅಜೀರ್ಣ, ಎದೆಉರಿ, ಪಿತ್ತ, ನಿದ್ರಾಹೀನತೆ, ಕಜ್ಜಿ, ತುರಿಕೆ, ಕೆಮ್ಮು-ದಮ್ಮು, ಸ್ತ್ರೀಯರ ಮಾಸಿಕ ತೊಂದರೆ, ಮಲಬದ್ಧತೆ, ತಕ್ತಹೀನತೆ, ಜ್ವರ, ಕಾಮಾಲೆ, ಹುಬ್ಬಸ, ಸೊಂಟ, ಬೆನ್ನು ನೋವು, ಸುಟ್ಟ ಗಾಯಗಳಿಗೆ, 18 ಬಗೆಯ ಔಷದಿಗಳಾದ ಆಶೋಕಾರಿಷ್ಟ, ದ್ರಾಕ್ಷಾಹಲೇಹ್ಯ, ಅಶ್ವಗಂಧಲೇಹ್ಯ, ಮುರಿವೆಣ್ಣ ತೈಲ, ಸಾರಿವಾದ್ಯಾಸವ, ಬೇಬಿ ಆಯಿಲ್, ಔಷಧಿ ಕಾಫ್ ಸಿರಪ್, ಔಷಧಿ ಟೂತ್ ಪೌಡರ್, ಚ್ಯವನಪ್ರಾಶ್, ನವಾಯಸ ಗುಟಿಕ, ಶಂಖ ವಟಿ, ಆರೋಗ್ಯವರ್ಧಿನಿ ವಟಿ, ಚಂದ್ರಪ್ರಭಾ ವಟಿ, ಲಘುಸೂತಶೇಖರ ರಸ, ಮಹಾನಾರಾಯಣ ತೈಲ. ಮಹಾಯೋಗರಾಜ ಗುಗ್ಗುಲು, ಜಾತ್ಯಾದಿ ತೈಲ, ಸುದರ್ಶನ ಘನವಟಿ ಸೇರಿದಂತೆ ಹಲವು ಔಷಧಿಗಳನ್ನು ವಿತರಿಸಲಾಯಿತು.

ಪರಿಸರದಲ್ಲಿ ದೊರಕುವ ಗಿಡಮೂಲಿಕೆಗಳನ್ನು ಬಳಸಿ ಔಷಧಿಗಳನ್ನು ತಯಾರಿಸಲಾಗಿದೆ. ಇದರಿಂದ ದೇಹಕ್ಕೆ ಯಾವದೇ ಸಮಸ್ಯೆಯಾಗುವದಿಲ್ಲ. ರೋಗಗಳು ಬಹುಬೇಗ ಗುಣಮುಖಹೊಂದುತ್ತದೆ. ಇದರ ಸುದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಮೈಸೂರಿನ ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಡಾ. ರಾಧಕೃಷ್ಣರಾವ್ ಪ್ರಸ್ತಾವಿಕ ನುಡಿಯಲ್ಲಿ ತಿಳಿಸಿದರು.

ಈ ಸಂದರ್ಭ ಬಲ್ಯಮಂಡೂರು ಗ್ರಾ.ಪಂ. ಅಧ್ಯಕ್ಷ ಕೊಟ್ಟಂಗಡ ಸಿ. ಪ್ರಕಾಶ್, ಗ್ರಾ.ಪಂ. ಸದಸ್ಯ ಚೋಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕೆ.ಕೆ. ಪೂಣಚ್ಚ, ಎಂ.ಎಸ್. ರಾಜೇಶ್, ವೈದ್ಯರುಗಳಾದ ಡಾ. ಮಮತಾಶ್ರಿ, ಸೂರ್ಯಕಾನ್, ಸಂಜಯ್ ಉಪಸ್ಥಿತರಿದ್ದರು.