ಸೋಮವಾರಪೇಟೆ, ಜ. 12: ಸರ್ಕಾರದ ಸೌಲಭ್ಯಗಳನ್ನು ಅಧಿಕಾರಿಗಳು ಕೃಷಿಕನ ಮನೆ ಬಾಗಿಲಿಗೆ ತಲುಪಿಸುವಂತಾದರೆ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಹೇಳಿದರು.

ಇಲ್ಲಿನ ಕೃಷಿ ಇಲಾಖೆಯ ಆವರಣದಲ್ಲಿ ನಡೆದ ಕೃಷಿಕರ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಫಸಲು ನಷ್ಟ ಅನುಭವಿಸಿ ಸಾಲಗಾರರಾಗಿದ್ದಾರೆ. ಸರ್ಕಾರ ಸೌಲಭ್ಯಗಳ ಬಗ್ಗೆ ಅನೇಕ ರೈತರಿಗೆ ಮಾಹಿತಿ ಇಲ್ಲದ ಕಾರಣ, ಅನೇಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಮಾಡಿ, ಅರ್ಹ ರೈತನನ್ನು ಗುರುತಿಸಿ, ಅವರಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಬೇಕು ಎಂದು ಹೇಳಿದರು.

ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಮಾತನಾಡಿ, ತಾಲೂಕಿನಲ್ಲಿ ಶೇ. 90 ರಷ್ಟು ಭತ್ತ ಕಟಾವು ಮುಕ್ತಾಯಗೊಂಡಿದೆ. ಬಹುತೇಕ ರೈತರು ಕೃಷಿ ಇಲಾಖೆಯಿಂದ ಸುಧಾರಿತ ತಳಿಯ ಭತ್ತದ ಬೀಜವನ್ನು ಖರೀದಿಸಿ, ಕೃಷಿ ಮಾಡಿರುವ ಹಿನ್ನೆಲೆ ಉತ್ತಮ ಇಳುವರಿಯನ್ನು ಪಡೆದುಕೊಂಡಿದ್ದಾರೆ. ಕೃಷಿಕರು ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ನಾಗರಾಜ್ ಮಾತನಾಡಿ, ರೈತರು ಸಾಕಿದ ಕುರಿ, ಮೇಕೆಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ, ಸರ್ಕಾರದಿಂದ 5 ಸಾವಿರ ರೂ.ಗಳ ಪರಿಹಾರ ಸಿಗಲಿದೆ. ಜಾನುವಾರುಗಳು ಸಾವನ್ನಪ್ಪಿದರೆ 10 ಸಾವಿರ ರೂ.ಗಳನ್ನು ಪಡೆಯಬಹುದು. ಕುರಿ, ಜಾನುವಾರುಗಳು ಸಾವನ್ನಪ್ಪಿದ ತಕ್ಷಣ ಸ್ಥಳೀಯ ಪಶು ವೈದ್ಯರಿಗೆ ಮಾಹಿತಿ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಮನು ಮೇದಪ್ಪ, ತಾಲೂಕು ಉಪಾಧ್ಯಕ್ಷ ಗೋವಿಂದರಾಜು, ಪದಾಧಿಕಾರಿಗಳಾದ ಕುಮುದಾ ಧರ್ಮಪ್ಪ, ಟಿ.ಕೆ. ರಮೇಶ್, ಹಿರಿಯ ಕೃಷಿ ಅಧಿಕಾರಿ ಮುಕುಂದ ಇದ್ದರು. ಜಿ.ಪಂ. ಎಇಇ ಜಯರಾಮ್, ಮೀನುಗಾರಿಕಾ ಸಹಾಯಕ ನಿರ್ದೇಶಕಿ ಮಿಲನಾ ಭರತ್, ತೋಟಗಾರಿಕಾ ಇಲಾಖೆಯ ಪ್ರಬಾರ ಸಹಾಯಕ ನಿರ್ದೇಶಕ ಮುತ್ತಪ್ಪ ಇಲಾಖಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.