*ಗೋಣಿಕೊಪ್ಪಲು, ಜ. 12: ಶಾಂತಚಿತ್ತ ಜೀವನಕ್ಕೆ ಆಧ್ಯಾತ್ಮಿಕವೊಂದೇ ಪರಿಹಾರ. ವಿವೇಕಾನಂದರ ಆದರ್ಶ ಹಾಗೂ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಬದುಕಿನಲ್ಲಿ ಸಾಧನೆಯ ಮೆಟ್ಟಿಲು ಹತ್ತಬಹುದು ಎಂದು ವಿಶ್ವದ ಕಿರಿಯ ಮುಖ್ಯೋಪಾಧ್ಯಾಯ ಹೆಗ್ಗಳಿಕೆಯ ಪಶ್ಚಿಮ ಬಂಗಾಳದ ಮುಶಿದಾಬಾದ್‍ನ ಬಾಬರ್‍ಆಲಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ನಡೆದ ವಿವೇಕಾನಂದರ 155ನೇ ಜನ್ಮ ದಿನಾಚರಣೆ ಪ್ರಯುಕ್ತ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ವಿವೇಕಾನಂದರ ತತ್ವಗಳಿಂದಲೇ ನನ್ನ ಸಾಧನೆಗೆ ಸ್ಪೂರ್ತಿ ಎಂದು ಹೇಳಿದ ಅವರು ನಿತ್ಯ ಜೀವನದಲ್ಲಿ ವಿವೇಕಾನಂದರ ವಾಣಿಗಳನ್ನು ಪಠಣ ಮಾಡಬೇಕು ಎಂದರು. ಗುರಿಯೊಂದಿಗೆ ಸಾಧನೆಗೆ ಮುಂದಾಗಲು ಏಕಾಗ್ರತೆ, ಧೈರ್ಯ ಮುಖ್ಯ. ಮನುಷ್ಯತ್ವ ಗುಣಗಳನ್ನು ಬೆಳೆಸಿಕೊಂಡು ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡು ಜೀವನ ನಡೆಸಿದರೆ ಯಾವದೇ ಜಂಜಾಟಗಳು ನಮ್ಮ ಸುತ್ತ ಸುತ್ತುವದಿಲ್ಲ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, 7 ವರ್ಷಗಳಲ್ಲಿ ಯುಗಪುರುಷ ಎನಿಸಿಕೊಂಡ ವಿವೇಕಾನಂದರ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಅವಕಾಶವಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವಿಚಾರಗಳನ್ನು ಪ್ರೇಮಿಗಳ ದಿನಾಚರಣೆಗಳನ್ನು ಹಂಚಿಕೊಂಡು ಸಂಭ್ರಮಿಸುವ ಯುವ ಸಮುದಾಯ ಇಂತಹ ಕನಿಷ್ಟ ಪದ್ದತಿಯಿಂದ ಹೊರಬರಬೇಕಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿವೇಕಾನಂದರ ನಡೆನುಡಿಗಳನ್ನು ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಯುವಕರು ಕಾರಣರಾಗಬೇಕು ಎಂದರು.
ಭಾರತದ ಪರಂಪರೆ ಎಂದು ಹೇಳುವ ಯೋಗಾಭ್ಯಾಸವನ್ನು ಆರೋಗ್ಯ ದೃಷ್ಟಿಯಿಂದಷ್ಟೆ ಅಭ್ಯಾಸ ಮಾಡುವದು ಅನಿವಾರ್ಯತೆಯಾಗಿದೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಯೋಗಕ್ಕೆ ಧಾರ್ಮಿಕ, ಪಾರಂಪರಿಕ ಅರ್ಥವನ್ನು ಕಲ್ಪಿಸಿ ಆಚರಣೆಯಾಗಿ ನಡೆಸುತ್ತಿದ್ದಾರೆ. ವಿದೇಶಿಗರು ನಮ್ಮ ಪರಂಪರೆ, ಸಂಸ್ಕøತಿಯನ್ನು ಮೆಚ್ಚಿಕೊಂಡರೆ ಭಾರತೀಯರಾದ ನಾವು ನಮ್ಮ
(ಮೊದಲ ಪುಟದಿಂದ) ಪದ್ದತಿಯನ್ನೆ ಮರೆತು ಪಾಶ್ಚಾತ್ಯ ಸಂಸ್ಕøತಿಯನ್ನು ಬೆಂಬಲಿಸುತ್ತಿದ್ದೇವೆ. ಇಂತಹ ಅನಿಷ್ಟತೆಯನ್ನು ತೊಡೆದು ಹಾಕಲು ಯುವಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಅನಂತಶಯನ ಮಾತನಾಡಿ, ಸಾಧು ಸನ್ಯಾಸಿಗಳಲ್ಲಿ ತಮ್ಮ ಬಗ್ಗೆ ದೇವರ ಬಗ್ಗೆ ತಿಳಿದುಕೊಳ್ಳುತ್ತಾ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡರೆ ಉತ್ತಮ ಮನುಷ್ಯನಾಗಲು ಸಾಧ್ಯ ಎಂದರು.
ನಿಮ್ಮನ್ನು ನೀವು ತಿಳಿಯದೆ ಇದ್ದರೆ ನಮ್ಮಲ್ಲಿನ ನಾಯಕತ್ವ ಗುಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಶ್ರದ್ದೆ, ಕಲಿಯುವ ಆಸಕ್ತಿ ಬೆಳೆಸಿಕೊಂಡು ಗುರು ಹಿರಿಯರಲ್ಲಿ ಭಕ್ತಿ ಗೌರವ ಇರಿಸಿಕೊಂಡರೆ ಯಶಸ್ಸು ನಿಮ್ಮದಾಗುತ್ತದೆ. ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ವ್ಯವಸ್ಥೆಗಳ ಬದಲಾವಣೆಗೆ ಯುವಕರು ಕಾರಣರಾಗಬೇಕು ಎಂದು ಹೇಳಿದರು.
ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪಟ್ಟಡ ಪೂವಣ್ಣ ಮಾತನಾಡಿ, ಯುವಶಕ್ತಿಗೆ ಇಂದು ಬೇಕಾಗಿರುವದು ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ. ಅಪಾರವಾದ ಕನಸ್ಸುಗಳನ್ನು ಕಾಣುವ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಇದಕ್ಕೆ ಶ್ರಮ ವಹಿಸಿ ಸಮಯ ಪಾಲಿಸುವದು ವಿದ್ಯಾರ್ಥಿಗಳ ಕರ್ತವ್ಯ ಎಂದು ಹೇಳಿದರು. ಕುಟ್ಟ ವೃತ್ತ ನಿರೀಕ್ಷಕ ರಾಜು ಮಾತನಾಡಿ, ಸಾಧನೆಗೆ ಯಾವದೇ ಅಡ್ಡದಾರಿಯಿಲ್ಲ. ಪರಿಶ್ರಮವಷ್ಟೆ ಸಾಧನೆಗೆ ಮೆಟ್ಟಿಲು. ವಿದ್ಯಾರ್ಥಿ ದೆಶೆಯಲ್ಲಿಯೇ ನಿಮ್ಮ ಸಾಧನೆಗೆ ಅಡಿಗಲ್ಲು ಹಾಕಬೇಕು. ವಿವೇಕಾನಂದರ ತತ್ವಗಳು ಮನಸ್ಸಿನ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಭೋದಸ್ವರೂಪ ನಂದಾಜಿ ಮಾತನಾಡಿ ವ್ಯಕ್ತಿ ಪರಿಪೂರ್ಣತೆಯನ್ನು ಹೊಂದಲು ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಗುಣಗಳನ್ನು ಹೊಂದಬೇಕು. ಇಂತಹ ಗುಣಗಳಿಂದ ಜೀವನ ಸಾರ್ಥಕವಾಗುತ್ತದೆ ಎಂದರು.
ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಪೊನ್ನಂಪೇಟೆ ಸರಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ಆಶ್ರಮದವರೆಗೆ ವಿವೇಕಾನಂದರ ಭಾವಚಿತ್ರ ಹೊತ್ತ ಭವ್ಯ ಮಂಟಪದೊಂದಿಗೆ ಮೆರವಣಿಗೆ ನಡೆಯಿತು. ವೇದಿಕೆಯಲ್ಲಿ ಆಶ್ರಮದ ವಿಶ್ರಾಂತ ಅಧ್ಯಕ್ಷ ಸ್ವಾಮಿ ಜಗದಾತ್ಮನಂದಾಜಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಡೀನ್ ಸಿ.ಜಿ. ಕುಶಾಲಪ್ಪ ಉಪಸ್ಥಿತರಿದ್ದರು.