ಮಡಿಕೇರಿ, ಜ. 13: ಪ್ರಸಕ್ತ ಚುನಾವಣಾ ವರ್ಷವಾದ್ದರಿಂದ ಪಕ್ಷದೊಳಗೆ ಆಂತರಿಕ ಅಭಿಪ್ರಾಯ ಭೇದವಿರುವದು ಸಹಜವೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಅಭಿಪ್ರಾಯಪಟ್ಟಿದ್ದು, ತಾ. 24 ರಂದು ಜಿಲ್ಲೆಗೆ ಆಗಮಿಸಲಿರುವ ರಾಜ್ಯ ಬಿಜೆಪಿ ಪರಿವರ್ತನಾ ಯಾತ್ರೆಯ ಸಂಬಂಧ ಪೂರ್ವಭಾವಿ ಸಭೆ ನಡೆಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ವೇಳೆ ಕೆಲವು ಸಣ್ಣಪುಟ್ಟ ವಿಷಯಗಳು ಪ್ರಸ್ತಾಪವಾಗಿದ್ದು, ಆಂತರಿಕ ಗೊಂದಲಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರು ಕಾಳಜಿ ಹೊಂದಿದ್ದಾರೆ ಎಂದು ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿದ್ದಾರೆ.

ಅಲ್ಲದೆ ತಾ. 24 ರಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಸಮಾವೇಶ ಇಲ್ಲಿನ ಗಾಂಧಿ ಮೈದಾನದಲ್ಲಿ ಹಗಲು 11 ಗಂಟೆಗೆ ನಡೆಯಲಿದೆ ಎಂದು ತಿಳಿಸಿದ ಅವರು, ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗಾಂಧಿ ಮೈದಾನ ತನಕ ಮೆರವಣಿಗೆ ಹಮ್ಮಿಕೊಳ್ಳಲಾಗುವದು ಎಂದು ವಿವರಿಸಿದ್ದಾರೆ.

ಅರ್ಹತೆಯಿಂದ ಕೇಳಿರುವೆ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಘದ ಕಾಲದಿಂದ ಕೊಡಗಿನವರಿಗೆ ಸ್ಪರ್ಧಿಸಲು ಅವಕಾಶ ಲಭಿಸದಿರುವ ಕಾರಣ ಈ ಬಾರಿ ತನ್ನ ಅರ್ಹತೆಯಿಂದ ಟಿಕೆಟ್ ಕೇಳುತ್ತಿರುವದಾಗಿ ಮಾಜಿ ಅಧ್ಯಕ್ಷ ಎಂ.ಎಂ. ರವೀಂದ್ರ ‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾನು ತಾಲೂಕು ಹಾಗೂ ಜಿಲ್ಲಾ ಅಧ್ಯಕ್ಷನಾಗಿ ದುಡಿದಿದ್ದು, ಶಾಸಕರಿಂದಾಗಿ ಜಿಲ್ಲಾಧ್ಯಕ್ಷ ಸ್ಥಾನ ಕಳೆದುಕೊಳ್ಳಬೇಕಾಯಿತು ಎಂದಿದ್ದಾರೆ.