ವೀರಾಜಪೇಟೆ, ಜ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಸುಣ್ಣದ ಬೀದಿಯ ಕಾಂಕ್ರಿಟ್ ರಸ್ತೆ ದುರಸ್ತಿಗೊಂಡಿದ್ದನ್ನು ರೂ. 19 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗೆ ಮರು ಡಾಮರೀಕರಣ ಮಾಡಿ ರಸ್ತೆಯನ್ನು ದುರಸ್ತಿ ಮಾಡಲಾಗಿದೆ.
ಕಳೆದ 9 ವರ್ಷಗಳ ಹಿಂದೆ ಸುಮಾರು ಮೂವತ್ತೆಂಟು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಕಾಂಕ್ರಿಟ್ ರಸ್ತೆ ಈಚೆಗೆ ಮೇಲ್ಪದರ ಹಾನಿಗೊಳ ಗಾಗಿದ್ದು ಸಾರ್ವಜನಿಕರು ಸಂಘ-ಸಂಸ್ಥೆಗಳ ಒತ್ತಡದ ಮೇರೆಗೆ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ದುಸ್ಥಿತಿಯ ಕಾಂಕ್ರಿಟ್ ರಸ್ತೆಯಲ್ಲಿ ಆಟೋ ರಿಕ್ಷಾಗಳು, ಲಘು ವಾಹನಗಳು ಸಂಚರಿಸಲು ಕಷ್ಟ ಸಾಧ್ಯವಾಗುತ್ತಿತ್ತು. ದುಸ್ಥಿತಿ ರಸ್ತೆಯಿಂದ ಲಘು ವಾಹನಗಳು ಮಗುಚಿ ಬಿದ್ದ ಘಟನೆಗಳು ನಡೆದಿವೆ.
ಇದೇ ಸಂದರ್ಭ ಖುದ್ದು ಹಾಜರಿದ್ದ ಅಭಿಯಂತರ ಎನ್.ಪಿ. ಹೇಮ್ ಕುಮಾರ್ ಮಾತನಾಡಿ, ಈಗ ಪಟ್ಟಣ ಪಂಚಾಯಿತಿ ಮುಖ್ಯ ರಸ್ತೆಯ ಬದ್ರಿಯಾ ಜಂಕ್ಷನ್ನಿಂದ ಸುಣ್ಣದ ಬೀದಿಯ ಕೆಳಗಿನ ಮಾಂಸ ಮಾರುಕಟ್ಟೆಯವರೆಗೆ ಸುಮಾರು 340 ಮೀಟರ್ ಮರು ಡಾಮರೀಕರಣದ ಕಾಮಗಾರಿಯಿಂದ ರಸ್ತೆ ಸುಸ್ಥಿತಿಗೆ ತಲುಪಿದ್ದು ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಈಗ ರಸ್ತೆಯ ಇಕ್ಕೆಲಗಳಲ್ಲಿ ಆಯ್ದ ಸ್ಥಳಗಳಲ್ಲಿ ಇಂಟರ್ಲಾಕ್ ಅಳವಡಿಸುವ ಕಾಮಗಾರಿ, ಪಾದಚಾರಿಗಳು ಸಂಚರಿಸುವ ಫುಟ್ಪಾತ್ಗೆ ಕಾಂಕ್ರಿಟ್ನ ನೆಲಹಾಸು ಹಾಕಲು ಚಾಲನೆ ನೀಡಲಾಗುವದು. 2009,2014 ಹಾಗೂ 2015ರಲ್ಲಿ ಎಸ್.ಎಫ್. ಎಸ್.ಸಿ ನಿಧಿಯಲ್ಲಿ ಕಾಮಗಾರಿ ನಿರ್ವಹಿಸಿ ಉಳಿಕೆಯಾದ ಹಣದಿಂದ ಈ ರಸ್ತೆ ಕಾಮಗಾರಿಯನ್ನು ನಿರ್ವಹಿಸಲಾಗಿದೆ. ಇದಕ್ಕಾಗಿ ಸುಮಾರು ನಾಲ್ಕು ದಿನಗಳ ಕಾಲ ಸುಣ್ಣದ ಬೀದಿ ರಸ್ತೆಯನ್ನು ಬಂದ್ ಮಾಡಲಾಗಿತ್ತು ಎಂದು ತಿಳಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಹಾಜರಿದ್ದರು.