ಗೋಣಿಕೊಪ್ಪ ವರದಿ, ಜ. 12: ಕಾಪ್ಸ್ ಶಾಲೆಯ 22 ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನೀಡುವ ಮೂಲಕ ಸಂಭ್ರಮಿಸಿದರು. ವಿವಿಧ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.
ಹಿರಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಿ ಶಾಲಾ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ದ್ವಿತೀಯ ಪದವಿಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ಬಿ.ಪಿ ಆಶಿಕಾ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕ್ಯಾಲಿಫೋರ್ನಿಯಾದ ಲಾಸ್ಏಂಜೆಲ್ಸ್ನ ವಿದ್ಯಾಸಂಸ್ಥೆಯಲ್ಲಿ ಉತ್ತಮ ಅಂಕಗಳೊಂದಿಗೆ ಪದವಿ ಪಡೆದ ಶಾಲೆಯ ಹಳೆಯ ವಿದ್ಯಾರ್ಥಿ ಸಿ.ಬಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಪೌರಾಣಿಕ ಹಿನ್ನೆಲೆಯ ನಾಟಕಗಳು, ವಿವಿಧ ನೃತ್ಯಗಳು ಮೂಡಿಬಂತು. ಅತಿಥಿಯಾಗಿ ಆಗಮಿಸಿದ್ದ ಅಸೋಷಿಯೇಷನ್ ಆಫ್ ಸ್ಕೂಲ್ಸ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಸಂಸ್ಥೆಯ ಸದಸ್ಯ ಸಿ.ಜೆ. ಜೋಸೆಫ್ ಮಾತನಾಡಿ, ಶಿಕ್ಷಕರು ಉತ್ತಮ ಸಮಾಜದ ನಿರ್ಮಾಪಕರುಗಳು, ಪೋಷಕರು ಹಾಗೂ ಶಿಕ್ಷಕರುಗಳೊಂದಿಗೆ ಮಕ್ಕಳನ್ನು ಬೆಸೆಯುವ ಅಗತ್ಯವಿದೆ ಎಂದರು. ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎಂ. ತಿಮ್ಮಯ್ಯ ಮಾತನಾಡಿ, ಎಜುಕೇಶನ್ ಟುಡೇ ಸಮೀಕ್ಷೆಯ ಪ್ರಕಾರ ಶಾಲೆಗೆ ಅತ್ಯುತ್ತಮ ಶಾಲೆ ಬಿರುದು ಸಿಕ್ಕಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಪಾತ್ರವೂ ಬಹಳ ಮಹತ್ವದ್ದಾಗಿರುತ್ತದೆ ಎಂದರು. ಪ್ರಾಂಶುಪಾಲ ಬೆನ್ನಿಕುರಿಯ ಕೋಸ್ ವಾರ್ಷಿಕ ವರದಿಯನ್ನು ವಾಚಿಸಿದರು.