ಗೋಣಿಕೊಪ್ಪಲು, ಜ. 13: 1500 ಫಲಾನುಭವಿಗಳಿಗೆ ಬೆಳಕಿನ ಭಾಗ್ಯ ವಿತರಣೆಯು ನಡೆಯುತ್ತಿದ್ದು ಇದರ ಮುಂದುವರೆದ ಕಾರ್ಯಕ್ರಮ ಮಡಿಕೇರಿ ತಾಲೂಕಿನ ಚೇರಂಬಾಣೆ ಹಾಗೂ ಕುಂದಚೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು. ಪಂಚಾಯಿತಿ ವ್ಯಾಪ್ತಿಯ 40 ಫಲಾನುಭವಿಗಳಿಗೆ ಕರ್ನಾಟಕ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಸೋಲಾರ್ ದೀಪಗಳನ್ನು ವಿತರಿಸಿದರು.
ಚೇರಂಬಾಣೆ ಹಾಗೂ ಕುಂದಚೇರಿ ಗ್ರಾಮ ಪಂಚಾಯಿತಿಯಲ್ಲಿ ಅಯೋಜನೆಗೊಂಡಿದ್ದ ಕಾರ್ಯಕ್ರಮ ದಲ್ಲಿ 40 ಫಲಾನುಭವಿಗಳಿಗೆ ಸೋಲಾರ್ ದೀಪವನ್ನು ವಿತರಿಸಿ ಮಾತನಾಡಿದ ಪದ್ಮಿನಿ ಪೊನ್ನಪ್ಪ, ವೀರಾಜಪೇಟೆ ತಾಲೂಕಿನ 24 ಪಂಚಾಯಿತಿಗಳ ಫಲಾನುಭವಿಗಳಿಗೆ ಇದರ ಪ್ರಯೋಜನ ಈಗಾಗಲೇ ನೀಡಲಾಗಿದ್ದು, ಮಡಿಕೇರಿ ತಾಲೂಕಿನ ವಿವಿಧ ಪಂಚಾಯಿತಿಗಳ ಫಲಾನುಭವಿಗಳಿಗೆ ಸೋಲಾರ್ ವಿತರಿಸಲಾಗುತ್ತಿದೆ ಎಂದರು.
ಮುಂದಿನ ತಿಂಗಳಿನಿಂದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಕಾರ್ಯಕ್ರಮವಾಗಿ ಅನಿಲ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸ ಲಾಗುವದು. 600 ಫಲಾನುಭವಿಗಳಿಗೆ ಅನಿಲ ವಿತರಣೆ ಮಾಡಲಾಗುವದು ಎಂದ ಅವರು, ಫೆಬ್ರವರಿ ತಿಂಗಳಿನಲ್ಲಿ ವಿಧವೆ ಹಾಗೂ ಅವಿವಾಹಿತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸುವ ಕಾರ್ಯಕ್ರಮ ಕರ್ನಾಟಕ ರಾಜ್ಯ ಅರಣ್ಯ ನಿಗಮದ ವತಿಯಿಂದ ನಡೆಸಲಾಗುವದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೋಬಳಿ ಕಾಂಗ್ರೆಸ್‍ನ ಅಧ್ಯಕ್ಷ ಹರೀಶ್, ಬಶೀರ್, ತಾ.ಪಂ. ಸದಸ್ಯೆ ಅಶಾ ಜೇಮ್ಸ್ ಕಾಂಗ್ರೆಸ್ ಮುಖಂಡ ಎಂ.ಎಂ. ಪೊನ್ನಪ್ಪ ಹಾಗೂ ಸ್ಥಳೀಯ ನಾಯಕರು ಹಾಜರಿದ್ದರು.