ವೀರಾಜಪೇಟೆ, ಜ. 12: ಶಾಲಾ ವಿದ್ಯಾರ್ಥಿಗಳಿಗೆ ವೀರಾಜಪೇಟೆಯ ಅರಮೇರಿ ಗ್ರಾಮದಲ್ಲಿರುವ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ವಿದ್ಯಾಪೀಠ ವತಿಯಿಂದ ಅಂತರ್ ಶಾಲಾ ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ವಿದ್ಯಾರ್ಥಿಗಳು ಪಠ್ಯದಲ್ಲಿರುವ ವಿಷಯಗಳ ಹೊರತಾಗಿ ಬಾಹ್ಯವಾದ ವಿಷಯಗಳನ್ನು ಅರಿತುಕೊಳ್ಳುವದರಿಂದ ಜ್ಞಾನ ಸಂಪಾದನೆಯೊಂದಿಗೆ ಬುದ್ಧಿ ಕ್ಷಮತೆಯು ಹೆಚ್ಚಾಗುತ್ತದೆ. ಅರಿವಿನೊಂದಿಗೆ ಪರಸ್ಪರ ವಿಚಾರ ವಿನಿಮಯಗಳು ಹೆಚ್ಚಾಗಿ ಮಾಡುವದರಿಂದ ಸೃಜನಶೀಲಾ ಸಮಾಜ ರೂಪುಗೊಳ್ಳುತ್ತದೆ ಎಂದರು.

ಕಾರ್ಯಕ್ರಮಕ್ಕೆ ರಾಫೇಲ್ ಇಂಟರ್ ನ್ಯಾಷನಲ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಸಿ.ಎ. ಮುಜೀಬ್ ಮತ್ತು ದೇವಣಗೇರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲೋಕೇಶ್ ಮುಖ್ಯ ಅತಿಥಿಗಳಾಗಿ ಅಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ 8 ಶಾಲೆಗಳಿಂದ ಒಟ್ಟು 32 ವಿದ್ಯಾರ್ಥಿಗಳು ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆಯ ನಿಶ್ಚಲ್ ಪೂವಯ್ಯ ಮತ್ತು ಪಿ.ವೈ. ರಿಶಿಕ ತನ್ನದಾಗಿಸಿಕೊಂಡರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಲೂಡ್ರ್ಸ್ ಪಾಲಿಬೆಟ್ಟ ಶಾಲೆಯ ವಿದ್ಯಾರ್ಥಿಗಳಾದ ರಾಣಿ ಕರುಂಬಯ್ಯ ಮತ್ತು ವಿಶ್ವಿನಿ ಡಿಸೋಜ ಪ್ರಥಮ, ಗುಡ್ ಶೆಫರ್ಡ್ ಪ್ರೌಢಶಾಲೆ ಅಮ್ಮತ್ತಿ ವಿದ್ಯಾರ್ಥಿಗಳಾದ ಯು.ಎಸ್. ಅಪ್ಪಯ್ಯ, ಎಸ್. ನವನೀತ್, ದ್ವಿತೀಯ ಸ್ಥಾನ ಪಡೆದುಕೊಂಡರು.

ಎಸ್.ಎಂ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಪಿ. ಕುಸುಂ ಸ್ವಾಗತಿಸಿ, ವಂದಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಎಸ್.ಎಂ.ಎಸ್. ವಿದ್ಯಾಪೀಠದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.